ADVERTISEMENT

‘83ರ ಹರೆಯ: ಮರೆಯಾಗದ ಮುಖದ ಮಂದಹಾಸ’

ಹಂಪನಾ ಹುಟ್ಟು ಹಬ್ಬದ ಸಂಭ್ರಮ; ‘ಗಿಫ್ಟ್ ಆಫ್‌ ನಾಲೆಡ್ಜ್‌ ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 19:20 IST
Last Updated 7 ಅಕ್ಟೋಬರ್ 2018, 19:20 IST
ಪ್ರೊ. ಹಂಪ. ನಾಗರಾಜಯ್ಯ, ಅವರ ಪತ್ನಿ ಕಮಲಾ ಹಂಪನಾ ಅವರನ್ನು ಗೌರವಿಸಲಾಯಿತು. (ಎಡದಿಂದ) ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ, ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ, ಫ್ರಾನ್ಸ್‌ನ ಲೋಯಲ್‌ ವಿಶ್ವವಿದ್ಯಾಲಯದ ಡಾ.ಬಸಿಲ್ ಲೆಕ್ಲೆರ್, ಪ್ರೊ. ಕ್ರಿಸ್ಟಿನ್ ಚೊಜನಕಿ, ಜಪಾನ್‌ನ ಮಿಯಕೊನೊಜೋ ವಿ.ವಿಯ  ಪ್ರೊ.ಪೂಜಿ ನಾಗಶಿನ್, ಕೋಲ್ಕತ್ತದ ಡಾ.ಸೈಯದ್ ಹಸ್ಮತ್ ಜಲಾಲ್, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ ರಾಮೇಗೌಡ, ಮತ್ತು ಬೆಲ್ಜಿಯಂನ ಗೆಂಟ್‌ ವಿ.ವಿಯ ಡಾ.ಕೇಟ್ ಕ್ರೋ ಇದ್ದಾರೆ –ಪ್ರಜಾವಾಣಿ ಚಿತ್ರ
ಪ್ರೊ. ಹಂಪ. ನಾಗರಾಜಯ್ಯ, ಅವರ ಪತ್ನಿ ಕಮಲಾ ಹಂಪನಾ ಅವರನ್ನು ಗೌರವಿಸಲಾಯಿತು. (ಎಡದಿಂದ) ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ, ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ, ಫ್ರಾನ್ಸ್‌ನ ಲೋಯಲ್‌ ವಿಶ್ವವಿದ್ಯಾಲಯದ ಡಾ.ಬಸಿಲ್ ಲೆಕ್ಲೆರ್, ಪ್ರೊ. ಕ್ರಿಸ್ಟಿನ್ ಚೊಜನಕಿ, ಜಪಾನ್‌ನ ಮಿಯಕೊನೊಜೋ ವಿ.ವಿಯ  ಪ್ರೊ.ಪೂಜಿ ನಾಗಶಿನ್, ಕೋಲ್ಕತ್ತದ ಡಾ.ಸೈಯದ್ ಹಸ್ಮತ್ ಜಲಾಲ್, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ ರಾಮೇಗೌಡ, ಮತ್ತು ಬೆಲ್ಜಿಯಂನ ಗೆಂಟ್‌ ವಿ.ವಿಯ ಡಾ.ಕೇಟ್ ಕ್ರೋ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹಂಪನಾ ಅವರಿಗೆ 83 ವರ್ಷ ಆಗಿದ್ದು ಹೌದೇ...! ಅವರ ಮುಖದ ಮಂದಹಾಸ ನೋಡಿದರೆ ನಂಬಲು ಸಾಧ್ಯವೇ ಇಲ್ಲ.. ಹೀಗೊಂದು ಚರ್ಚೆ ಸಾಹಿತ್ಯಾಸಕ್ತರ ನಡುವೆ ಎದ್ದಿತ್ತು..

ನ್ಯಾಷನಲ್‌ ಕಾಲೇಜಿನಲ್ಲಿ ಭಾನುವಾರ ಕನ್ನಡ ಜನಶಕ್ತಿ ಕೇಂದ್ರದ ವತಿಯಿಂದ ಆಯೋಜನೆಗೊಂಡಿದ್ದ ಪ್ರೊ.ಹಂಪ.ನಾಗರಾಜಯ್ಯ (ಹಂಪನಾ)–83, ಅಂತರರಾಷ್ಟ್ರೀಯ ಶುಭಾಶಯ ಸಮಾರಂಭ ಹಾಗೂ ‘ಗಿಫ್ಟ್‌ ಆಫ್‌ ನಾಲೆಡ್ಜ್‌’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ವಿಭಿನ್ನವಾದ ಚರ್ಚೆ, ಹಾಸ್ಯ ಹಾಗೂ ಕನ್ನಡ ಸಾಹಿತ್ಯದ ಉಳಿವಿನ ಕುರಿತ ಚಿಂತನೆಗೆ ವೇದಿಕೆಯಾಯಿತು.

ಬಂದ ಅತಿಥಿಗಳನ್ನು ವಾದ್ಯದ ಮೂಲಕ ಬರಮಾಡಿಕೊಳ್ಳಲಾಯಿತು. ಹಂಪನಾ ಹಾಗೂ ಕಮಲಾ ಹಂಪನಾ ದಂಪತಿಗಳಿಗೆ ಶುಭ ಹಾರೈಸಲು ಬಂದಿದ್ದ ಕುಟುಂಬದವರು, ಸಾಹಿತಿಗಳ ನಡುವೆ ಹತ್ತಕ್ಕೂ ಹೆಚ್ಚು ವಿದೇಶೀಯರೂ ಇದ್ದರು. ಅವರ ಗುರುತು ಸಿಗದವರು ಆಶ್ಚರ್ಯದ ಕಣ್ಣುಗಳಿಂದ ನೋಡುತ್ತಿದ್ದರು.

ADVERTISEMENT

ಬೇರೆ ಬೇರೆ ದೇಶದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಂಪನಾ ಅವರಿಗೆ ಶುಭಾಶಯ ಕೋರಲು ಬಂದಿದ್ದರು. ಇಂತದ್ದೊಂದು ಅಪರೂಪದ ಸನ್ನಿವೇಶ ಅಲ್ಲಿ ನಿರ್ಮಾಣಗೊಂಡಿತ್ತು.

ಜೆಕ್‌ ರಿಪಬ್ಲಿಕ್‌ನ ಪ್ರಾಹ ವಿಶ್ವವಿದ್ಯಾಲಯದ ಡಾ.ಜೋಸೆಫ್‌ ಬರ್ತೊಸೆಕ್‌, ‘ಒಮ್ಮೆ ನನಗೆ ಬಂದ ಇ–ಮೇಲ್‌ನಲ್ಲಿ ಜೈನಿಸಂ ಕುರಿತ ಪುಸ್ತಕಗಳ ಮಾಹಿತಿ ಇತ್ತು. ಓದಲು ಆಸಕ್ತಿ ಇದ್ದರೆ ಸಂಪರ್ಕಿಸುವಂತೆ ಒಕ್ಕಣೆ ಇತ್ತು. ನನಗೆ ಕುತೂಹಲ ಇದ್ದದ್ದರಿಂದ ಪುಸ್ತಕಗಳನ್ನು ತರಿಸಿಕೊಂಡು ಓದಿದೆ. ಅದು ಹಂಪನಾ ಅವರಿಂದ ಬಂದ ಮೇಲ್‌ ಆಗಿತ್ತು. ಆ ಮೂಲಕ ನನಗೆ ಅವರ ಪರಿಚಯ ಆಯಿತು. ಅವರಿಂದ ನನಗೆ ವಿಭಿನ್ನ ಸಂಸ್ಕೃತಿಯ ಪರಿಚಯ ಆಯಿತು. ಹಂಪನಾ ಅವರು ಭಾರತದ ಸಂಸ್ಕೃತಿ, ಸಾಹಿತ್ಯ ಹಾಗೂ ಕನ್ನಡವನ್ನು ವಿಶ್ವಮಟ್ಟದಲ್ಲಿ ಬೆಳೆಸುವ ಹುಮ್ಮಸ್ಸಿನಲ್ಲಿದ್ದಾರೆ’ ಎಂದರು.

ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಕನ್ನಡವನ್ನು ಕೇವಲ ಸಂಸ್ಕೃತದ ನೆಲೆಗಟ್ಟಿನಲ್ಲಿ ನೋಡುವ ಪರಂಪರೆ ಇತ್ತು. ಆದರೆ ಹಂಪನಾ ಅವರಿಂದ ಪ್ರಾಕೃತದ ಹಿನ್ನೆಲೆಯಿಂದಲೂ ಕನ್ನಡ ಸಾಹಿತ್ಯವನ್ನು ಕಟ್ಟುವ ಪರಂಪರೆ ಬೆಳೆಯುತ್ತಿದೆ. ಇದಕ್ಕಾಗಿ ಅವರು ಶತಾಯುಷಿಗಳಾಗಿ ಬಾಳಬೇಕು. ಕನ್ನಡಕ್ಕೆ ಇನ್ನಷ್ಟು ಕೊಡುಗೆ ನೀಡಬೇಕು’ ಎಂದು ಅಭಿಪ್ರಾಯಪಟ್ಟರು.

‘ವಿದ್ವತ್‌ ಪರಂಪರೆಗೆ ಸೇರಿರುವ ಹಂಪನಾ ಅವರು ಕನ್ನಡದಲ್ಲಿ 75, ಇಂಗ್ಲಿಷ್‌ನಲ್ಲಿ 25 ಕೃತಿ ರಚಿಸಿದ್ದಾರೆ. ಕಮಲಾ ಅವರೊಂದಿಗೆ ಅಂತರ್ಜಾತಿ ವಿವಾಹವಾಗುವ ಮೂಲಕ ಆ ಕಾಲದಲ್ಲಿಯೇ ಕ್ರಾಂತಿಕಾರಕ ನಿರ್ಧಾರ ತೆಗೆದುಕೊಂಡಿದ್ದರು. ಅವರಿಬ್ಬರ ಆದರ್ಶ ಬದುಕು ಮಾದರಿಯಾಗಿದೆ’ ಎಂದರು.

ಕಿರುಚಿತ್ರ ನೋಡಿ ಕಣ್ಣೊರೆಸಿಕೊಂಡರು
ಜರ್ಮನಿಯ ನಸ್ರೀನ್‌ ಸಾಂಡೆರಲಿ ಮತ್ತು ಯಾಸ್ಮೀನ್‌ ಸಾಂಡೆರಲಿ ಅವರು ಪ್ರಪಂಚದ ಐದು ಆದರ್ಶ ಜೋಡಿಗಳನ್ನು ಆಯ್ಕೆ ಮಾಡಿ ಸಾಕ್ಷ್ಯಚಿತ್ರ ತಯಾರಿಸಿದ್ದಾರೆ. ಅದರಲ್ಲಿ ಹಂಪನಾ ದಂಪತಿಯೂ ಇದ್ದಾರೆ.

ಹಂಪನಾ ಅವರು ತಮ್ಮ ಮನೆಯ ಹಾಲ್‌ನಲ್ಲಿ ಕುಳಿತು ‘ಪ್ರಜಾವಾಣಿ’ ಪತ್ರಿಕೆಯನ್ನು ಓದುತ್ತಾ ಪತ್ನಿಯನ್ನು ಎರಡು ಬಾರಿ ಕರೆಯುತ್ತಾರೆ. ಆದರೆ, ಅಡುಗೆ ಮಾಡುತ್ತಿದ್ದ ಕಮಲಾ ಅವರಿಂದ ಉತ್ತರ ಬರುವುದಿಲ್ಲ. ಮೂರನೇ ಬಾರಿ ಕರೆದಾಗ ತುಸು ಕೋಪದಿಂದ ‘ಅಡುಗೆಗೆ ಸಹಾಯ ಮಾಡೋಕಂತೂ ಆಗಲ್ಲ, ನನ್ನನ್ನು ಕರೆಯಬೇಡಿ’ ಎಂದು ಗದರುತ್ತಾರೆ.

ಹೀಗೆ ಸಾಕ್ಷ್ಯಚಿತ್ರ ಆರಂಭವಾಗುತ್ತದೆ...ಅವರ ಮದುವೆಯ ಕುರಿತು ಕಮಲಾ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ.. ಹಂಪನಾ ಅವರ ಸಂಬಂಧಿಯೊಬ್ಬರು ಕಮಲಾ ಅವರಿಗೆ ‘ನೀನು ಅವರೊಂದಿಗೆ ಇರಬಹುದು. ಆದರೆ, ಹಂಪನಾ ಅವರಿಗೆ ಬೇರೆಯವರೊಂದಿಗೆ ಮದುವೆ ಮಾಡುತ್ತೇವೆ’ ಎನ್ನುತ್ತಾರೆ. ಈ ಮಾತನ್ನು ಹೇಳಿದ ಬಳಿಕ ಕಮಲಾ ಅವರು ಭಾವುಕರಾಗಿ ಬಿಕ್ಕಿ ಬಿಕ್ಕಿ ಅಳುತ್ತಾರೆ. ಪಕ್ಕದಲ್ಲಿದ್ದ ಹಂಪನಾ, ತಮ್ಮ ಶಲ್ಯದಲ್ಲಿ ಅವರ ಕಣ್ಣೀರು ಒರೆಸುತ್ತಾರೆ. ಈ ದೃಶ್ಯ ಕಂಡು ಬಹುತೇಕ ಸಭಿಕರು ಕಣ್ಣೊರೆಸಿಕೊಂಡರು.

ಕೃತಿ: ‘ಗಿಫ್ಟ್‌ ಆಫ್‌ ನಾಲೆಡ್ಜ್‌’
ಪುಟಗಳ ಸಂಖ್ಯೆ: 450
ಪ್ರಕಾಶನ: ಸಪ್ನಾ
ಬೆಲೆ: ₹ 725
ಸಂಪಾದನೆ: ಫ್ರಾನ್ಸ್‌ನ ಕ್ರಿಸ್ಟಿನ್‌ ಚೊಜನಕಿ, ಬಸಿಲ್‌ ಲೆಕ್ಲೆರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.