ಬೆಂಗಳೂರು: ಮಹಿಳೆಗೆ ಕಿರುಕುಳ ನೀಡುತ್ತಿದ್ದ ಆರೋಪದ ಅಡಿ ಇಂದಿರಾನಗರ ಪೊಲೀಸ್ ಠಾಣೆ ಕಾನ್‌ಸ್ಟೆಬಲ್ ಹಾಗೂ ಇತರರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಸಂತನಗರದ ಪೊಲೀಸ್ ಕ್ವಾಟ್ರರ್ಸ್ ನಿವಾಸಿ ರೇಖಾ ಅವರು ನೀಡಿದ ದೂರಿನ ಮೇರೆಗೆ ಇಂದಿರಾನಗರ ಠಾಣೆಯ ಕಾನ್‌ಸ್ಟೆಬಲ್ ಮನೋಜ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಸದ್ಯ ಕಾನ್‌ಸ್ಟೆಬಲ್ ನಾಪತ್ತೆ ಆಗಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ದೂರುದಾರೆ ರೇಖಾ ಅವರ ಪತಿ ಅಪಘಾತದಲ್ಲಿ ಮೃತಪಟ್ಟಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಸಲ್ಲಿಸಲು ನ್ಯಾಯಾಲಯಕ್ಕೆ ಹೋಗಿದ್ದ ವೇಳೆ ಮನೋಜ್ ಪರಿಚಯವಾಗಿತ್ತು. ಬಳಿಕ ಇಬ್ಬರೂ ಸ್ನೇಹಿತರಾಗಿದ್ದು, ನಂತರ ಪ್ರೀತಿಗೆ ತಿರುಗಿ, ಕಳೆದ ವರ್ಷ ಮದುವೆ ಆಗಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಕೆಲವು ದಿನಗಳ ಹಿಂದೆ ಪೊಲೀಸ್ ಕ್ವಾಟ್ರಸ್‌ಗೆ ಬಂದಿದ್ದ ಮನೋಜ್ ಅವರ ಸಹೋದರಿಯರು ರೇಖಾಗೆ ನಿಂದಿಸಿದ್ದರು. ಅದಾದ ಮೇಲೆ ಮನೋಜ್ ಹಾಗೂ ರೇಖಾ ಮಧ್ಯೆ ಗಲಾಟೆ ಆರಂಭವಾಗಿತ್ತು. ವಿಚ್ಛೇದನ ಕೊಡುವಂತೆ ಮನೋಜ್ ಪೀಡಿಸುತ್ತಿದ್ದರು. ಹಲ್ಲೆಯನ್ನೂ ನಡೆಸಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.