ADVERTISEMENT

ಮಹಿಳಾ ಪೊಲೀಸ್‌ಗೆ ಕಿರುಕುಳ: ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 19:34 IST
Last Updated 25 ಫೆಬ್ರುವರಿ 2019, 19:34 IST
ರಮೇಶ್
ರಮೇಶ್   

ಬೆಂಗಳೂರು: ಬಾಗಲಗುಂಟೆ ಠಾಣೆಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಿ ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಕಿರುಕುಳ ನೀಡುತ್ತಿದ್ದ ಆರೋಪದಡಿ ರಮೇಶ್ ನಾಯಕ್ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ನಿವಾಸಿಯಾದ ರಮೇಶ್, ಬೆಂಗಳೂರಿನ ಮಂಜುನಾಥ್ ನಗರದಲ್ಲಿ ನೆಲೆಸಿದ್ದ. ಎರಡು ತಿಂಗಳಿನಿಂದ ಠಾಣೆಗೆ ಕರೆ ಮಾಡುತ್ತಿದ್ದ ಆತ, ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ಹೇಳಿದರು.

‘ಜೂಜಾಟವಾಡುತ್ತಿದ್ದ ಆರೋಪಿ, ಅದರಿಂದ ಹಣ ಕಳೆದುಕೊಂಡಿದ್ದ. ನಂತರ, ಕುಟುಂಬದವರಿಂದಲೂ ದೂರವಾಗಿ ಬೆಂಗಳೂರಿಗೆ ಬಂದು ಒಂಟಿಯಾಗಿ ನೆಲೆಸಿದ್ದ. ಪೊಲೀಸ್ ಠಾಣೆ, ಸರ್ಕಾರಿ ಹಾಗೂ ಖಾಸಗಿ ಕಚೇರಿ ಸೇರಿದಂತೆ ಹಲವೆಡೆ ಕರೆ ಮಾಡಿ ತೊಂದರೆ ಕೊಡುತ್ತಿದ್ದ ಎಂಬ ಮಾಹಿತಿ ಇದ್ದು, ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.

ADVERTISEMENT

‘ಎರಡು ಅಥವಾ ಮೂರು ದಿನಕ್ಕೊಮ್ಮೆ ಬಾಗಲಗುಂಟೆ ಠಾಣೆಗೆ ಕರೆ ಮಾಡುತ್ತಿದ್ದ ಆರೋಪಿ, ಮಹಿಳಾ ಕಾನ್‌ಸ್ಟೆಬಲ್‌ ಜೊತೆ ಅಶ್ಲೀಲವಾಗಿ ಮಾತನಾಡುತ್ತಿದ್ದ. ‘ಬರ್ತಿಯಾ’ ಎಂದು ಕರೆಯುತ್ತಿದ್ದ ಆತ, ‘ಒಂದು ದಿನ ನನ್ನ ಜೊತೆ ಸಹಕರಿಸು’ ಎಂದು ಅಸಭ್ಯವಾಗಿ ವರ್ತಿಸುತ್ತಿದ್ದ. ‘ನಾನು ಕೊಲೆ ಹಾಗೂ ಅತ್ಯಾಚಾರ ಮಾಡಿದ್ದೇನೆ. ನಿಮಗೆ ತಾಕತ್ತಿದ್ದರೆ, ನಾನು ಇರುವಲ್ಲಿಗೆ ಬಂದು ಬಂಧಿಸಿ’ ಎಂದು ಸವಾಲು ಹಾಕುತ್ತಿದ್ದ’.

‘ಆತನ ಕಾಟ ವಿಪರೀತವಾಗುತ್ತಿದ್ದಂತೆ ಮಹಿಳಾ ಕಾನ್‌ಸ್ಟೆಬಲ್‌ಗಳು, ದೂರು ದಾಖಲಿಸಿದ್ದರು. ಕರೆ ವಿವರ ಸಂಗ್ರಹಿಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ನಕಲಿ ವಿಳಾಸ: ‘ಕರೆ ವಿವರ ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರು, ಆರೋಪಿಯ ವಿಳಾಸವನ್ನು ಪತ್ತೆ ಹಚ್ಚಿದ್ದರು. ಅಲ್ಲಿಗೆ ಹೋಗಿ ವಿಚಾರಿಸಿದಾಗ, ಅದು ನಕಲಿ ವಿಳಾಸ ಎಂಬುದು ತಿಳಿಯಿತು. ನಂತರ, ಆತನ ಮೊಬೈಲ್‌ಗೆ ಬಂದಿದ್ದ ಕರೆಯೊಂದನ್ನು ಆಧರಿಸಿ ಆತನಿರುವ ಜಾಗ ಪತ್ತೆ ಮಾಡಲಾಯಿತು’ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.