ADVERTISEMENT

ದ್ವೇಷ ಭಾಷಣ: ಸ್ವಯಂಪ್ರೇರಿತ ದೂರು ದಾಖಲಿಸದಿದ್ದರೆ ಪೊಲೀಸರ ವಿರುದ್ಧವೇ ಕ್ರಮ–ಸಿಎಂ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 16:21 IST
Last Updated 27 ಜೂನ್ 2025, 16:21 IST
<div class="paragraphs"><p>ಬೆಂಗಳೂರಿನಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್‌ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಮನೆ ಮನೆಗೆ ಪೊಲೀಸ್‌’ ಎಂಬ ಯೋಜನೆಯ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು.&nbsp;</p></div>

ಬೆಂಗಳೂರಿನಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್‌ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಮನೆ ಮನೆಗೆ ಪೊಲೀಸ್‌’ ಎಂಬ ಯೋಜನೆಯ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು. 

   

ಬೆಂಗಳೂರು: ‘ದ್ವೇಷ ಭಾಷಣ, ಪ್ರಚೋದನಕಾರಿ ಹೇಳಿಕೆ ಹಾಗೂ ಸುಳ್ಳು ಸುದ್ದಿ ಪ್ರಕಟಿಸುತ್ತಿರುವ ವ್ಯಕ್ತಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರ ವಿರುದ್ಧವೇ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು. 

ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್‌ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ADVERTISEMENT

‘ದಲಿತರು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಮೇಲೆ ದೌರ್ಜನ್ಯ ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು. ಬಾಲ್ಯ ವಿವಾಹ ತಡೆಗಟ್ಟಬೇಕು. ಅತ್ಯಾಚಾರ, ಭ್ರೂಣಹತ್ಯೆಗಳನ್ನು ನೂರಕ್ಕೆ ನೂರು ತಡೆಗಟ್ಟುವ ದಿಸೆಯಲ್ಲಿ ಪೊಲೀಸರು ಕೆಲಸ ಮಾಡಬೇಕು. ಮಾದಕ ವಸ್ತು ಮುಕ್ತ ರಾಜ್ಯ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಅಂಗಡಿಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾದರೆ ಅಂತಹ  ಅಂಗಡಿಯ ಪರವಾನಗಿ ರದ್ದು ಮಾಡಬೇಕು’ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. 

‘ಕಳೆದ 2 ವರ್ಷದಲ್ಲಿ ಕೊಲೆ, ದರೋಡೆ, ಮನೆಗಳ್ಳತನ ಪ್ರಕರಣಗಳು ಕಡಿಮೆ ಆಗಿವೆ ಎಂಬುದು ಅಂಕಿಅಂಶದಿಂದ ಗೊತ್ತಾಗಿದೆ. ಅಪರಾಧ ಪ್ರಕರಣಗಳು ಮತ್ತಷ್ಟು ಕಡಿಮೆ ಮಾಡುವುದಕ್ಕಾಗಿ ಪೊಲೀಸರು ಕಾರ್ಯ ನಿರ್ವಹಣೆ ಮಾಡಬೇಕು. ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕು. ಆಧುನಿಕ ತಂತ್ರಜ್ಞಾನ ಬಳಸಿ ಸೈಬರ್ ಅಪರಾಧಿಗಳನ್ನು ಪತ್ತೆ ಹಚ್ಚಿ ವಂಚಕರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಹಿರಿಯ ಅಧಿಕಾರಿಗಳು ಪೊಲೀಸ್ ಠಾಣೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಚೇರಿಗಳಲ್ಲೇ ಕುಳಿತಿರಬಾರದು’ ಎಂದು ನಿರ್ದೇಶನ ನೀಡಿದರು.  

‘ಬೀದರ್‌ನಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿ ಯಾರು ಎಂದು ಗೊತ್ತಾಗಿದ್ದರೂ ಐದು ತಿಂಗಳಿಂದ ಆತನನ್ನು ಬಂಧಿಸಿಲ್ಲ. ಬಿಡಿ ಬಿಡಿ ಪ್ರಕರಣಗಳಲ್ಲಿ ತನಿಖೆಯ ಗುಣಮಟ್ಟ ಹೆಚ್ಚಿದ್ದರೂ ಒಟ್ಟಾರೆಯಾಗಿ ಗಮನಿಸಿದಾಗ ತನಿಖೆಯ ಗುಣಮಟ್ಟ ಕುಸಿದಿದೆ. ಅಪರಾಧ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿಯನ್ನು ಸೂಕ್ತ ಸಮಯದಲ್ಲಿ, ಪರಿಣಾಮಕಾರಿಯಾಗಿ ಸಲ್ಲಿಸಬೇಕು. ನಿರ್ಲಕ್ಷ್ಯ ಮಾಡಿದರೆ ಸಹಿಸಲ್ಲ’ ಎಂದು ಎಚ್ಚರಿಸಿದರು.  

ಮಂಗಳೂರು ಮಾತ್ರ ಹದಗೆಟ್ಟಿದ್ದೇಕೆ?: ‘ಕೋಮು ಘರ್ಷಣೆ ಮತ್ತು ಕೊಲೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹೆಚ್ಚಾಗಿ ನಡೆಯುತ್ತಿವೆ. ಇತರೆ ಜಿಲ್ಲೆಗಳಲ್ಲಿ ಯಾಕೆ ಆಗುತ್ತಿಲ್ಲ’ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ‘ದಕ್ಷಿಣ ಕನ್ನಡ ಜಿಲ್ಲೆಯ ನೆಮ್ಮದಿ ಕೆಡಿಸುವವರನ್ನು ಮೂಲದಿಂದಲೇ ಪತ್ತೆಹಚ್ಚಿ, ಅವರು ಯಾರೇ ಇದ್ದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಿ’ ಎಂದು ಸೂಚನೆ ನೀಡಿದರು.

‘ನಾವು ವ್ಯವಸ್ಥೆಯನ್ನು ದೂಷಿಸಿಕೊಂಡು ಕೈ–ಕಟ್ಟಿಕೊಂಡು ಕೂರುವುದಿಲ್ಲ. ಪೊಲೀಸ್ ಠಾಣೆಗಳು ಜನಸ್ನೇಹಿ ಆಗುವ ಜತೆಗೆ ಅಪರಾಧ ಮನಃಸ್ಥಿತಿಯವರಿಗೆ ಕಾನೂನಿನ ಬಗ್ಗೆ ಭಯ ಇರುವ ವಾತಾವರಣ ಸೃಷ್ಟಿಸಬೇಕು’ ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೈಬರ್‌ ಅಪರಾಧಗಳು ಹೆಚ್ಚುತ್ತಿವೆ. ಆರೋಪಿಗಳ ಪತ್ತೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ತನಿಖೆಯ ಗುಣಮಟ್ಟ ಹೆಚ್ಚಿಸುವಂತೆ ಸೂಚಿಸಿದ್ದೇನೆ.
ಸಿದ್ದರಾಮಯ್ಯ ಮುಖ್ಯಮಂತ್ರಿ

ಗೃಹ ಸಚಿವ ಜಿ.ಪರಮೇಶ್ವರ ಮಾತನಾಡಿ, ‘ಕರಾವಳಿ ಭಾಗದಲ್ಲಿ ಸೌಹಾರ್ದ ಕಾಪಾಡಲು ವಿವಿಧ ಧಾರ್ಮಿಕ ಸಂಘಟನೆಗಳ ಮುಖಂಡ ಜತೆಗೆ ಸಭೆ ನಡೆಸಬೇಕು. ದ್ವೇಷ ಭಾಷಣ, ಪ್ರಚೋದನಾತ್ಮಕ ಭಾಷಣ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು. ಇದೇ ಕಾರಣದಿಂದ ಆ ಭಾಗದ ಜನ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮಂಗಳೂರು ಬಿಟ್ಟು ಬೆಂಗಳೂರು, ಮೈಸೂರಿಗೆ ಕಳುಹಿಸುತ್ತಿದ್ದಾರೆ’ ಎಂದು ಹೇಳಿದರು.

‘ಎಸ್‌ಸಿ, ಎಸ್‌ಟಿ ಸಮುದಾಯಗಳ ಜನರೊಂದಿಗೆ ಕಾಟಾಚಾರಕ್ಕೆ ಸಭೆಗಳನ್ನು ಮಾಡುವುದು ಸರಿಯಲ್ಲ. ಶೋಷಿತರು, ಬಡವರ ಸಮಸ್ಯೆಗಳನ್ನು ಬಗೆಹರಿಸುವುದರಿಂದ ನೀವು ಏನು ಕಳೆದುಕೊಳ್ಳುತ್ತೀರಿ? ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಶೇ 2ರಷ್ಟಿದೆ. ಈ ಪ್ರಕರಣಗಳಲ್ಲಿ ತ್ವರಿತವಾಗಿ ದೋಷಾರೋಪ ಪಟ್ಟಿ ದಾಖಲಿಸುತ್ತಿಲ್ಲ. ಇದೇ ಕಾರಣಕ್ಕೆ ಸಾಕ್ಷ್ಯ ನಾಶವಾಗುತ್ತದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ ಎಂದು ಗೃಹ ಸಚಿವರು ಸೂಚಿಸಿದರು. 

‘ತನಿಖೆಯಲ್ಲಿ ಮಧ್ಯ ಪ್ರವೇಶಿಸಲ್ಲ’‌

‘ಲೋಕಾಯುಕ್ತ ಪೊಲೀಸ್‌ ಅಧಿಕಾರಿಯೊಬ್ಬರ ವಿರುದ್ಧ ಸುಲಿಗೆ ಆರೋಪವಿದ್ದು ಈ ಪ್ರಕರಣದ ತನಿಖೆಯಲ್ಲಿ ನಾನು ಮಧ್ಯ ಪ್ರವೇಶಿಸಲ್ಲ. ತನಿಖೆ ವೇಳೆ ಲೋಪಗಳು ಕಂಡುಬಂದರೆ ಹೇಳುತ್ತೇನೆ’ ಎಂದು ಮುಖ್ಯಮಂತ್ರಿ ಹೇಳಿದರು.

ಮೈಸೂರು ಪ್ರಕರಣ: ತನಿಖಾಧಿಕಾರಿ ಅಮಾನತಿಗೆ ಸೂಚನೆ ಮೈಸೂರು ಜಿಲ್ಲೆಯ ಬೆಟ್ಟದಪುರದಲ್ಲಿ ಪತ್ನಿ ನಾಪತ್ತೆಯಾದ ಕುರಿತು ದೂರು ನೀಡಿದ ಪತಿ ಸುರೇಶ್‌ ವಿರುದ್ಧವೇ ಪತ್ನಿಯ ಕೊಲೆ ಆರೋಪ ಹೊರಿಸಿ ಸುಳ್ಳು ಪ್ರಕರಣ ದಾಖಲಿಸಿದ್ದ ಪ್ರಕರಣದ ತನಿಖಾಧಿಕಾರಿಯ ಅಮಾನತಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು. ಸುಳ್ಳು ಪ್ರಕರಣದಲ್ಲಿ ಸುರೇಶ್ ಅವರು ಜೈಲು ಶಿಕ್ಷೆ ಅನುಭವಿಸಿದ್ದರು.

ಕಾಲ್ತುಳಿತ: ಗುಪ್ತಚರ ಇಲಾಖೆ ವಿರುದ್ಧ ಕಿಡಿ ‘ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣವನ್ನು ಹಿಂದೆಂದೂ ನಾನು ನೋಡಿರಲಿಲ್ಲ. ಗುಪ್ತಚರ ಇಲಾಖೆ ಇರುವುದೇಕೆ? ಸರಿಯಾದ ಮಾಹಿತಿ ನೀಡಲಿಲ್ಲ. ಇದರಿಂದಾಗಿ 11 ಮಂದಿ ಮೃತಪಟ್ಟರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

‘ಕಾಲ್ತುಳಿತ ಘಟನೆ ನಡೆದ ದಿನ‌ ಮಧ್ಯಾಹ್ನ 3.50ಕ್ಕೆ ಸಾವುಗಳು ಸಂಭವಿಸಿದ್ದವು. ಆದರೂ ಸರಿಯಾದ ಮಾಹಿತಿ ಕೊಟ್ಟಿರಲಿಲ್ಲ. ಇದು ತಪ್ಪು ಅಲ್ಲವೇ? ಸಂಜೆ 5.45ಕ್ಕೆ ನಾನೇ ಕೇಳಿದಾಗಲೂ ಒಂದೇ ಸಾವು ಆಗಿದೆ ಎನ್ನುವ ಮಾಹಿತಿ ನೀಡಿದ್ದರು. ಆ ವೇಳೆಗೆ 11 ಮಂದಿಯ ಸಾವು ಸಂಭವಿಸಿತ್ತು. ಹಿರಿಯ ಅಧಿಕಾರಿ ಸರಿಯಾದ ಮಾಹಿತಿಯನ್ನು ತಕ್ಷಣ ನಮಗೆ ನೀಡಿದ್ದರೆ ಚಿನ್ನಸ್ವಾಮಿ ಕ್ರೀಡಾಂಗಣದ ವಿಜಯೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಲು ಸೂಚನೆ ನೀಡಬಹುದಿತ್ತು’ ಎಂದು ಹೇಳಿದರು.

‘ಹಿರಿಯ ಅಧಿಕಾರಿಗಳ ಅಮಾನತು ಮಾಡಿದ್ದರಲ್ಲಿ ನನಗೂ ಬೇಸರ ಇದೆ. ಆದರೆ ತಪ್ಪಾಗಿದ್ದು ನಿಜ ತಾನೇ’ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಸಿ.ಎಂ ಹೇಳಿದ್ದು...

  • ಇಲಾಖೆಯಲ್ಲಿ ಖಾಲಿ ಇರುವ 4,117 ಹುದ್ದೆಗಳ ಭರ್ತಿಗೆ ಸದ್ಯದಲ್ಲೇ ಚಾಲನೆ  

  • ಪೊಲೀಸ್ ಇಲಾಖೆಯ ಬೇಡಿಕೆಗಳಲ್ಲಿ ಬಹುತೇಕ ಈಡೇರಿಸಿ ಸಾಕಷ್ಟು ಅನುದಾನ ಒದಗಿಸಲಾಗಿದೆ. ಸಮಾಜದ ನೆಮ್ಮದಿ, ಕಾನೂನು–ಸುವ್ಯವಸ್ಥೆಯನ್ನು ನಿಮ್ಮಿಂದ ನಿರೀಕ್ಷಿಸಲಾಗುತ್ತಿದೆ

  • ಸಮಾಜದ ನೆಮ್ಮದಿ ಕಾಪಾಡಲು ಪೊಲೀಸ್ ಕಾರ್ಯಕ್ಷಮತೆ ಬಹಳ ಮುಖ್ಯ

ಬೆಂಗಳೂರಿನಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್‌ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಪೊಲೀಸ್‌ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಫೋಟೊ ತೆಗೆಸಿಕೊಂಡರು     
ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಪೊಲೀಸ್‌ ಅಧಿಕಾರಿಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.