ADVERTISEMENT

5 ಸಾವಿರ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದೇವೆ: ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ

ಚುರುಕುಗೊಂಡ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2018, 11:14 IST
Last Updated 1 ಆಗಸ್ಟ್ 2018, 11:14 IST
   

ಬೆಂಗಳೂರು: ‘ನಗರದಾದ್ಯಂತ 5 ಸಾವಿರ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬುಧವಾರ ಹೈಕೋರ್ಟ್‌ಗೆ ತಿಳಿಸಿದೆ.

ನಗರದಾದ್ಯಂತ ಗಿಜಿಗುಟ್ಟುತ್ತಿದ್ದ ಫ್ಲೆಕ್ಸ್‌ಗಳ ತೆರವಿಗೆ ಬೆಳಗ್ಗೆಯಷ್ಟೇ ಕೆಂಡಾಮಂಡಲವಾಗಿದ್ದ ಹೈಕೋರ್ಟ್ ಮಧ್ಯಾಹ್ನದೊಳಗೆ ಎಲ್ಲಾ ಫ್ಲೆಕ್ಸ್‌ ತೆರವಿಗೆ ಆದೇಶಿಸಿತ್ತು.

ಮಧ್ಯಾಹ್ನ ಪ್ರಕರಣ ವಿಚಾರಣೆಗೆ ಬಂದಾಗ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ, ‘ಮಧ್ಯಾಹ್ನದ ವೇಳೆಗೆ 5 ಸಾವಿರ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ತಿಳಿಸಿದರು.

ADVERTISEMENT

ಇದಕ್ಕೆ‌ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ, ‘ಹಾಗಾದರೆ ಉಳಿದವುಗಳನ್ನು ರಾತ್ರಿಯೊಳಗೆ ತೆರವುಗೊಳಿಸುತ್ತೀರಾ’ ಎಂದು ಪ್ರಶ್ನಿಸಿದರು.

ಈ ಮಧ್ಯೆ ‘ನಾವು ಅಧಿಕೃತವಾಗಿ ಪರವಾನಗಿ ಪಡೆದು ಹಾಕಲಾಗಿರುವ ಫ್ಲೆಕ್ಸ್‌ಗಳನ್ನೂ ತೆರವುಗೊಳಿಸಲಾಗುತ್ತಿದೆ’ ಎಂದು ದೂರಿ ತೆರವು ಪ್ರಕ್ರಿಯೆ ಸ್ಥಗಿತಕ್ಕೆ ಜಾಹೀರಾತುದಾರರ ಪರ ವಕೀಲರು ಮನವಿ ಮಾಡಿದರು.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ಯಪಡಿಸಿದ ನ್ಯಾಯಪೀಠ ‘ನಿಮ್ಮದು ಅಧಿಕೃತವೋ ಅನಧಿಕೃತವೋ ಆಮೇಲೆ‌ ನಿರ್ಧರಿಸೋಣ. ಮೊದಲು ಬೆಂಗಳೂರಿನ ವೈಭವ ಮರುಕಳಿಸಲಿ. ನೀವು ಪರವಾನಗಿ ಪಡೆದು ಅಧಿಕೃತವಾಗಿಯೇ ಫ್ಲಕ್ಸ್‌ಗಳನ್ನು ಹಾಕಿದ್ದರೆ ಅವುಗಳನ್ನು ಪುನಃ ತೂಗುಹಾಕುವ ಬಗ್ಗೆ ನಂತರ ನಿರ್ಧರಿಸೋಣ’ ಎಂದರು.

‘ನಗರದಲ್ಲಿ ಫ್ಲೆಕ್ಸ್, ಬ್ಯಾನರ್‌ಗಳ ಹಾವಳಿ ಹೆಚ್ಚಾಗಿದೆ. ಇದೊಂದು ತೊಂದರೆ ದಾಯಕ ವಿಚಾರ. ಈ ಸಮಸ್ಯೆಗೆ ಒಂದು ಇತಿಶ್ರೀ ಹಾಡಲೇಬೇಕು‌ ಇದು ಕೇವಲ ಇಂದು ತೆರವು ಮಾಡಿ ಪುನಃ ನಾಳೆ‌ ಹಾಕುವುದಲ್ಲ. ಇದಕ್ಕೆ ಶಾಶ್ವತವಾಗಿ ತೆರೆ ಎಳೆಯಲು ಒಂದು ನೀತಿ ರೂಪಿಸಬೇಕು. ಆ ನೀತಿ ಹೇಗಿರುತ್ತದೆ ಎನ್ನುವುದನ್ನು ಮುಂದಿನ ವಿಚಾರಣೆಯಲ್ಲಿ ತಿಳಿಸಿ’ ಎಂದು ಬಿಬಿಎಂಪಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 8ಕ್ಕೆ ಮುಂದೂಡಿದೆ.

ಬಿಬಿಎಂಪಿ ಕಮಿಷನರ್ ಎನ್‌. ಮಂಜುನಾಥ ಪ್ರಸಾದ್‌ ವಿಚಾರಣೆ ವೇಳೆ ಹಾಜರಿದ್ದರು.

ಬಿಬಿಎಂಪಿಗೆ ಹೈಕೋರ್ಟ್‌ ತರಾಟೆ
* ಎಲ್ಲವನ್ನೂ ಕೋರ್ಟ್ ಹೇಳಿದ ಮೇಲೆಯೇ ನೀವು ಸರಿಪಡಿಸಬೇಕೆ?
* ನೀವೇನು ಸಂವಿಧಾನಕ್ಕಿಂತಲೂ ಮಿಗಿಲೇ?
* ಬಿಬಿಎಂಪಿ ದಿನದ 24 ಗಂಟೆಯೂ ಕೆಲಸ ಮಾಡಬೇಕು.
* ಸಾರ್ವಜನಿಕರು ಎಲ್ಲದಕ್ಕೂ ಪಿಐಎಲ್ ಹಾಕಿಕೊಂಡೇ ಕೋರ್ಟ್‌ಗೆ ಬರಬೇಕೆ?
* ಜಾಹೀರಾತು ನೀತಿಯನ್ನು ಏಕೆ ಜಾರಿಗೆ ತಾರದೆ ಉಳಿಸಿಕೊಂಡಿದ್ದೀರಿ?
* ನಿಮ್ಮ ಅಧಿಕಾರಿಗಳು ಯಾವಾಗ ಫ್ಲೆಕ್ಸ್ ತೆರವುಗೊಳಿಸುತ್ತಾರೆ?

ನೀರು ಹರಿಸದಂತೆ ಆದೇಶ
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಮುಂದಿನ ಆದೇಶದವರೆಗೂ ಹರಿಸುವಂತಿಲ್ಲ ಎಂಬ ಮಧ್ಯಂತರ ಆದೇಶವನ್ನು ಹೈಕೋರ್ಟ್ ವಿಸ್ತರಿಸಿದೆ.

ಈ ಕುರಿತಂತೆ ಆರ್. ಆಂಜನೇಯ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಎ.ಜಿ ಉದಯ ಹೊಳ್ಳ ಅವರು, ‘ನೀರಿನ ಗುಣಮಟ್ಟದ ಬಗ್ಗೆ ತಜ್ಞ ವರದಿ ಸಲ್ಲಿಸುತ್ತೇವೆ. ಹೀಗಾಗಿ 10 ದಿನಗಳ ಕಾಲಾವಕಾಶ ನೀಡುವಂತೆ’ ಮನವಿ ಮಾಡಿದರು.

ಸರ್ಕಾರದ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಆಗಸ್ಟ್ 16ಕ್ಕೆ ಮುಂದೂಡಿದೆ.

ಇದೇ ಪ್ರಕರಣದಲ್ಲಿ ಮಾಲೂರು ತಾಲ್ಲೂಕಿನ ಸಿದ್ದಪ್ಪ ಹಾಗೂ ಬಂಗಾರಪೇಟೆ ತಾಲ್ಲೂಕಿನ ಪ್ರಸನ್ನಕುಮಾರ್‌ ಎಂಬ ರೈತರು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ಈ ಯೋಜನೆ ಉಪಯುಕ್ತವಾಗಿದೆ. ರಾಜಕಾರಣಿಗಳು ತಮ್ಮ ಪ್ರತಿಷ್ಠೆಗಾಗಿ ತರಾತುರಿಯಲ್ಲಿ ಯೋಜನೆಗೆ ಚಾಲನೆ ನೀಡಿದ್ದಾರೆ ಎಂದು ಆಕ್ಷೇಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.