ಬೆಂಗಳೂರು: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ರಾಜ್ಯ ಸರ್ಕಾರ ಜಾತಿ ಗಣತಿ ಮಾಡುತ್ತಿದ್ದು, ಭವಿಷ್ಯದಲ್ಲಿ ಇದು ದೊಡ್ಡ ಸಮಸ್ಯೆಗೆ ಕಾರಣವಾಗಲಿದೆ. ಇದರ ಪ್ರತಿಫಲವನ್ನು ಕಾಂಗ್ರೆಸ್ ಪಕ್ಷ ಅನುಭವಿಸಲಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸಭೆ ಬಳಿಕ ಮಾತನಾಡಿದ ಅವರು, ‘ಸಭೆಯಲ್ಲಿ ಸಾಧಕ -ಬಾಧಕಗಳ ಬಗ್ಗೆ ಚರ್ಚಿಸಿದ್ದು, ಜಾತಿ ವಿಚಾರದಲ್ಲಿ ಒಕ್ಕಲಿಗರಿಗೆ ದೊಡ್ಡ ಮಟ್ಟದ ಪೆಟ್ಟು ಬಿದ್ದಿದೆ. ಬೆಂಗಳೂರಿನಲ್ಲಿ ಹೆಚ್ಚು ಭೂಮಿ ಕಳೆದುಕೊಂಡಿದ್ದು ಒಕ್ಕಲಿಗ ಸಮಾಜ. ಡಿ.ಕೆ. ಶಿವಕುಮಾರ್ ಎಲ್ಲಾ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸರ್ಕಾರದ ಸಮೀಕ್ಷೆ ನಂತರ ಬರಲಿರುವುದು ಮತ್ತೊಂದು ಎಚ್. ಕಾಂತರಾಜ ವರದಿ ಅಲ್ಲ, ಅದಕ್ಕಿಂತಲೂ ಕೆಟ್ಟದಾಗಿ ಇರುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸಮೀಕ್ಷೆಯಲ್ಲಿ ಅನ್ಯಾಯವಾದರೆ ಸ್ವಾಮೀಜಿಗಳ ನೇತೃತ್ವದಲ್ಲಿ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಜ್ಯ ಸರ್ಕಾರ ಬೆಂಕಿ ಹಚ್ಚುವ ಕೆಲಸ ಮಾಡಿದೆ. ಸಮೀಕ್ಷೆಗೆ 15 ದಿನಗಳ ಅವಕಾಶ ಕೊಟ್ಟಿದ್ದಾರೆ. ಅದರಲ್ಲಿ 9 ದಿನ ನವರಾತ್ರಿ, ಉಳಿದ 6 ದಿನಗಳಲ್ಲಿ ಆಯೋಗ ಏನು ವರದಿ ಕೊಡಲು ಸಾಧ್ಯ? ಹಾಗಾದರೆ ಕಾಂತರಾಜ ವರದಿಯನ್ನೇ ಭಟ್ಟಿ ಇಳಿಸುತ್ತಾರಾ’ ಎಂದು ಪ್ರಶ್ನಿಸಿದರು.
ಬೆಂಗಳೂರು ನಗರದ ಅಭಿವೃದ್ಧಿಗಾಗಿ 30 ವರ್ಷಗಳಲ್ಲಿ ಎಷ್ಟು ರೈತರ ಭೂಮಿ ಬಳಕೆ ಆಗಿದೆ. ಅದರಲ್ಲಿ ಬಹುಪಾಲು ಭೂಮಿ ಕಳೆದುಕೊಂಡವರು ಒಕ್ಕಲಿಗರು. ಈಗಲೂ ಗ್ರೇಟರ್ ಬೆಂಗಳೂರು ಹೆಸರಲ್ಲಿ ಭೂಮಿ ಕಿತ್ತುಕೊಳ್ಳುವುದು ನಡೆಯುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.