ADVERTISEMENT

₹24 ಲಕ್ಷ ವಂಚನೆ: ಆರೋಗ್ಯ ಇಲಾಖೆ ಉಪಕಾರ್ಯದರ್ಶಿ ಸೆರೆ

ಕೆಲಸ ಕೊಡಿಸುವುದಾಗಿ ₹24 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 19:24 IST
Last Updated 15 ಜನವರಿ 2019, 19:24 IST
ರಾಮಚಂದ್ರಯ್ಯ
ರಾಮಚಂದ್ರಯ್ಯ   

ಬೆಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ದೇವರಾಜ ಅರಸು ಅಭಿವೃದ್ಧಿ ನಿಗಮಗಳಲ್ಲಿ ಎಫ್‌ಡಿಎ ಕೆಲಸ ಕೊಡಿಸುವುದಾಗಿ ಒಂದೇ ಕುಟುಂಬದ ನಾಲ್ವರಿಂದ ₹ 24 ಲಕ್ಷ ಪಡೆದು ವಂಚಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪಕಾರ್ಯದರ್ಶಿ ರಾಮಚಂದ್ರಯ್ಯ ಸೇರಿ ಮೂವರು ವಿಧಾನಸೌಧ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಈ ಸಂಬಂಧ ಚನ್ನಪಟ್ಟಣದ ದೇವರ ಹೊಸಹಳ್ಳಿ ನಿವಾಸಿ ಆರ್.ಶ್ರೀಕಂಠಯ್ಯ ಎಂಬುವರು ಜ.11 ರಂದು ದೂರು ಕೊಟ್ಟಿದ್ದರು. ವಂಚನೆ (ಐಪಿಸಿ 420) ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್ ಬಿ.ಶಂಕರಾಚಾರ್ ನೇತೃತ್ವದ ತಂಡವು ರಾಮ
ಚಂದ್ರಯ್ಯ, ಕೆಂಗೇರಿ ಖಾಸಗಿ ಪಿ.ಯು ಕಾಲೇಜಿನ ಉಪನ್ಯಾಸಕ ದೇವರಾಜ್ ಹಾಗೂ ತಾವರೆಕೆರೆಯ ಲಕ್ಷ್ಮಿನಾರಾಯಣ ಎಂಬುವವರನ್ನು ಬಂಧಿಸಿದೆ.

ಪೂರ್ವಾಪರ: ಹಾಸನ ಜಿಲ್ಲೆಯವನಾದ ರಾಮಚಂದ್ರಯ್ಯ, 1980ನೇ ಸಾಲಿನಲ್ಲಿ ಕೆಪಿಎಸ್‌ಸಿ ಮೂಲಕ ಸಹಾಯಕ ಹುದ್ದೆಗೆ
ನೇಮಕವಾಗಿ ಸಮಾಜ ಕಲ್ಯಾಣ ಇಲಾಖೆಯನ್ನು ಸೇರಿದ್ದ. ನಂತರ ಗೃಹ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಹಿರಿಯ ಸಹಾಯಕನಾಗಿ, ವಸತಿ ಇಲಾಖೆಯಲ್ಲಿ ಶಾಖಾಧಿಕಾರಿಯಾಗಿ, ಹಣಕಾಸು ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿ, ಸದ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪಕಾರ್ಯದರ್ಶಿ ಹುದ್ದೆ ನಿಭಾಯಿಸುತ್ತಿದ್ದ. ಅಕ್ರಮ ಬಯಲಾದ ಬೆನ್ನಲ್ಲೇ ಸರ್ಕಾರ ಆತನನ್ನು ಅಮಾನತು ಮಾಡಿದೆ.

ADVERTISEMENT

‘ನನಗೆ ತಿಂಗಳಿಗೆ ₹70 ಸಾವಿರ ಸಂಬಳ ನಿಗದಿಯಾಗಿದ್ದು, ಎಲ್ಲ ಕಡಿತ ವಾಗಿ ₹ 35 ಸಾವಿರವಷ್ಟೇ ಕೈಗೆ ಸಿಗುತ್ತಿತ್ತು.
ಈ ಹಣ ಜೀವನ ನಿರ್ವಹಣೆಗೆ ಹಾಗೂ ನನ್ನ ವೈಯಕ್ತಿಕ ಖರ್ಚಿಗೆ ಸಾಲುತ್ತಿರಲಿಲ್ಲ. ಹೀಗಾಗಿ, ಅಕ್ರಮ ಸಂಪಾದನೆಗೆ ಇಳಿದಿದ್ದೆ. 2016ರಲ್ಲಿ ಉಪನ್ಯಾಸಕ ದೇವರಾಜು ಹಾಗೂ ಖಾಸಗಿ ಶಾಲೆ ಶಿಕ್ಷಕ ಲಕ್ಷ್ಮಿನಾರಾಯಣ ಅವರ ಪರಿಚಯವಾಯಿತು. ಮೂವರೂ ಒಟ್ಟಾಗಿ ಉದ್ಯೋಗ ಕೊಡಿಸುವ ನೆಪದಲ್ಲಿ ಜನರಿಗೆ ವಂಚಿಸಲು ಸಂಚು ರೂಪಿಸಿದೆವು’ ಎಂದು ರಾಮಚಂದ್ರಯ್ಯ ತಿಳಿಸಿದ್ದಾರೆ. ಪೊಲೀಸರಿಗೆ ಕೊಟ್ಟಿರುವ ಹೇಳಿಕೆಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಿದೆ.

ಬಂಧುಗಳನ್ನೇ ಕರೆತಂದ: ಶಿಕ್ಷಕ ವೃತ್ತಿ ತೊರೆದು ಪೂರ್ತಿಯಾಗಿ ಈ ದಂಧೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಲಕ್ಷ್ಮಿನಾರಾಯಣ, ಆರಂಭದಲ್ಲಿ ತನ್ನ ಬಂಧುಗಳನ್ನೇ ಟಾರ್ಗೆಟ್ ಮಾಡಿಕೊಂಡ. ಸಂಬಂಧಿಗಳಾದ ಅಭಿಷೇಕ್, ಜೆ.ಶ್ರುತಿ, ರಘು, ನರಸಿಂಹ, ಯೋಗನರಸಿಂಹ, ಸವಿತಾ ಲಕ್ಷ್ಮಿ, ಪುನೀತ್ ಕುಮಾರ್ ಅವರನ್ನು ರಾಮಚಂದ್ರಯ್ಯನಿಗೆ ಪರಿಚಯ ಮಾಡಿಸಿದ್ದ.

‘ನನಗೆ ಸಚಿವರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಪರಿಚಯವಿದೆ. ನಿಮಗೆ ಖಂಡಿತಾ ಕೆಲಸ ಕೊಡಿಸುತ್ತೇನೆ’ ಎಂದು ನಂಬಿಸಿ ಅವರಿಂದ ₹20 ಲಕ್ಷ ಪೀಕಿದ್ದ ರಾಮಚಂದ್ರಯ್ಯ, ಅದರಲ್ಲಿ ಲಕ್ಷ್ಮಿನಾರಾಯಣನಿಗೂ ಪಾಲು ಕೊಟ್ಟಿದ್ದ. ಹಲವು ತಿಂಗಳು ಕಳೆದರೂ ಕೆಲಸ ಸಿಗದಿದ್ದಾಗ ವಂಚನೆಗೆ ಒಳಗಾದವರು ಉಪ್ಪಾರಪೇಟೆಗೆ ಠಾಣೆಗೆ ದೂರು ಕೊಟ್ಟಿದ್ದರು. ಇದರ ಬೆನ್ನಲ್ಲೇ ಶ್ರೀಕಂಠಯ್ಯ ಎಂಬುವವರು ಸಹ, ‘ರಾಮಚಂದ್ರಯ್ಯ ನನ್ನ ಸಂಬಂಧಿಗಳಿಂದಲೂ ₹ 24 ಲಕ್ಷ ಪಡೆದು ವಂಚಿಸಿದ್ದಾನೆ’ ಎಂದು ವಿಧಾನಸೌಧ ಠಾಣೆ ಮೆಟ್ಟಿಲೇರಿದ್ದರು.

₹ 48 ಲಕ್ಷಕ್ಕೆ ಕುದುರಿತ್ತು ಡೀಲ್

‘ನನ್ನ ತಂಗಿ ಕೆ.ಅಂಜನಾ, ಸಂಬಂಧಿಕರಾದ ಸತೀಶ್, ಪುಟ್ಟತಾಯಮ್ಮ ಹಾಗೂ ಅಭಿಷೇಕ್ ಅವರಿಗೆ ಸರ್ಕಾರಿ ಕೆಲಸ ಕೊಡಿಸಲು ಓಡಾಡುತ್ತಿದ್ದೆ. ಸ್ನೇಹಿತನೊಬ್ಬ ಮೂಲಕ ಪರಿಚಿತರಾದ ದೇವರಾಜು ಹಾಗೂ ಲಕ್ಷ್ಮಿನಾರಾಯಣ, ‘ಹುದ್ದೆಗೆ ₹ 12 ಲಕ್ಷದಂತೆ ಹಣ ಕೊಟ್ಟರೆ ಎಫ್‌ಡಿಎ ಹುದ್ದೆ ಕೊಡಿಸುತ್ತೇವೆ’ ಎಂದರು. ಅದಕ್ಕೆ ಒಪ್ಪಿಕೊಂಡೆ. ನಂತರ ಆತ ರಾಮಚಂದ್ರಯ್ಯನನ್ನು ಭೇಟಿ ಮಾಡಿಸಿದರು. ನಾಲ್ವರಿಗೂ ಅಂಬೇಡ್ಕರ್ ಹಾಗೂ ದೇವರಾಜ ಅರಸು ನಿಗಮಗಳಲ್ಲಿ ಕೆಲಸ ಕೊಡಿಸುವುದಾಗಿ ಮುಂಗಡವಾಗಿ ₹ 24 ಲಕ್ಷ ಪಡೆದುಕೊಂಡ. ವಿಧಾನಸೌಧದ ಪಾರ್ಕಿಂಗ್ ಪ್ರದೇಶದಲ್ಲೇ ಮಾತುಕತೆಯಾಗಿ ಹಣ ಕೊಟ್ಟಿದ್ದೆ’ ಎಂದು ಶ್ರೀಕಂಠಯ್ಯ ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.