ADVERTISEMENT

ಜಡಿಮಳೆಗೆ ಕುಸಿದ ರಸ್ತೆ: ನೆಲಕ್ಕುರುಳಿದ ಮರ, ಹಲವೆಡೆ ರಸ್ತೆಗಳು ಜಲಾವೃತ

ತಗ್ಗುಪ್ರದೇಶಗಳಲ್ಲಿನ ಮನೆಗಳಿಗೆ ನುಗ್ಗಿದ ಕೊಳಚೆ ನೀರು * ಹೆಬ್ಬಾಳದ ಬಳಿ ರಸ್ತೆ ಅಪಘಾತ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 22:22 IST
Last Updated 29 ಏಪ್ರಿಲ್ 2020, 22:22 IST
ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮ ಬಳಿ ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು – ಪ್ರಜಾವಾಣಿ ಚಿತ್ರಗಳು
ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮ ಬಳಿ ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು – ಪ್ರಜಾವಾಣಿ ಚಿತ್ರಗಳು   
""

ಬೆಂಗಳೂರು: ನಗರದಲ್ಲಿ ಬುಧವಾರ ಬೆಳಿಗ್ಗೆ ಸುರಿದ ಭಾರೀ ಮಳೆ ಕೆಲವೆಡೆ ಅವಾಂತರ ಸೃಷ್ಟಿಸಿದೆ. ಬಹುತೇಕ ರಸ್ತೆಗಳು ಜಲಾವೃತಗೊಂಡರೆ, ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ನಸುಕಿನ 4.30ರ ಸುಮಾರಿಗೆ ಆರಂಭಗೊಂಡ ಮಳೆ, ಬೆಳಿಗ್ಗೆ 8 ಗಂಟೆವರೆಗೆ ಸುರಿಯಿತು. ಮೆಜೆಸ್ಟಿಕ್, ಶಾಂತಿನಗರ, ಕೋರಮಂಗಲ, ಬಿಟಿಎಂ ಲೇಔಟ್, ಕೆ.ಆರ್. ಮಾರುಕಟ್ಟೆ, ಕಾಮಾಕ್ಷಿಪಾಳ್ಯ, ವಿಜಯನಗರ, ಆರ್‌.ಟಿ. ನಗರ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಮಳೆಯ ಜೊತೆಗೆ ಗುಡುಗು, ಮಿಂಚು, ಗಾಳಿ ಇದ್ದ ಕಾರಣ 10ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ.

ಕೋರಮಂಗಲ ಬಡಾವಣೆಯ ರಸ್ತೆಯ ಮೇಲೆ ಮೊಣಕಾಲುದ್ದ ನೀರು ನಿಂತ ಕಾರಣ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಲ್ಲದೆ, ಜನರು ಮನೆಗಳಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಯಿತು. ಯಲಹಂಕ- ದೊಡ್ಡಬಳ್ಳಾಪುರ ಹೆದ್ದಾರಿ ಕೂಡ ಮಳೆ ನೀರಿಗೆ ಜಲಾವೃತವಾಯಿತು. ಶೇಷಾದ್ರಿಪುರ ಬಳಿ ಕಿನೊ ಚಿತ್ರಮಂದಿರ ಸಮೀಪದ ಕೆಳಸೇತುವೆಯಲ್ಲಿಯೂ ನೀರು ತುಂಬಿ ನಿಂತಿತು.

ADVERTISEMENT

ಚಿಕ್ಕಲಸಂದ್ರ, ಬೊಮ್ಮನಹಳ್ಳಿ, ಇಟ್ಟುಮಡು, ಎಚ್‌.ಎಸ್‌.ಆರ್‌ ಬಡಾವಣೆ, ಸುಬ್ರಹ್ಮಣ್ಯಪುರ, ಸುಂಕದಕಟ್ಟೆ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ, ಈ ಪ್ರದೇಶಗಳ ಜನರು ರಾತ್ರಿಯಿಡೀ ನೀರು ಹೊರಹಾಕಲು ಹರಸಾಹಸಪಟ್ಟರು.

ಇಂದಿರಾನಗರ, ಭಾರತೀನಗರ, ಶಾಂತಿನಗರ, ಮಹಾಲಕ್ಷ್ಮೀ ಲೇಔಟ್‌, ಮಲ್ಲೇಶ್ವರ, ಕೆ.ಆರ್‌. ಪುರ, ಜ್ಞಾನಭಾರತಿ, ಜಕ್ಕೂರು, ಉಲ್ಲಾಳ, ಗರುಡಚಾರ್ಯ ಪಾಳ್ಯ ಮತ್ತಿತರ ಕಡೆಗಳಲ್ಲಿ ಮರಗಳು ನೆಲಕ್ಕುರುಳಿವೆ ಎಂದು ಬಿಬಿಎಂಪಿ ಮೂಲಗಳು ಹೇಳಿವೆ.

ಶಾಂತಲಾ ನಗರ ವಾರ್ಡ್‍ನ ಹೇಯ್ಸ್ ರಸ್ತೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗೆದಿದ್ದ ಗುಂಡಿಗೆ ನೀರು ತುಂಬಿ ನಿಂತ ಪರಿಣಾಮ ಭೂಮಿ ಕುಸಿದಿದೆ. ಇದರಿಂದ ಅಕ್ಕಪಕ್ಕದ ಮನೆಗಳಿಗೆ ಅಪಾಯ ಎದುರಾಗಿದೆ. ಗೋವಿಂದರಾಜನಗರದ ಪಟ್ಟೇಗಾರಪಾಳ್ಯದಿಂದ ಶ್ರೀನಿವಾಸನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲೇ ಹಾದು ಹೋಗಿರುವ ರಾಜಕಾಲುವೆಯ ತಡೆಗೋಡೆ ಸಮೇತ ರಸ್ತೆ ಕುಸಿದಿದೆ.

ಕೆಲವಡೆ ರಸ್ತೆಗಳು ಜಲಾವೃತಗೊಂಡಿದ್ದರಿಂದ ಆಟೊಗಳು, ಕಾರುಗಳು, ದ್ವಿಚಕ್ರ ವಾಹನಗಳು ನೀರಿನಲ್ಲಿ ಸಿಲುಕಿಕೊಂಡವು. ಕೊಳಚೆ ನೀರು ಹರಿದ ಕಾರಣ ಕೆಲವು ಪ್ರದೇಶಗಳಲ್ಲಿ ದುರ್ನಾತ ಬೀರುತ್ತಿತ್ತು.

ನಗರದ ಹೊರವಲಯ ಆನೇಕಲ್, ಅತ್ತಿಬೆಲೆ, ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಮಳೆ ಆರ್ಭಟಿಸಿದೆ. ಬೆಳಿಗ್ಗೆಯೇ ಕಾರ್ಯಾಚರಣೆಗಿಳಿದ ಬಿಬಿಎಂಪಿ ಸಿಬ್ಬಂದಿ, ನೆಲಕ್ಕುರುಳಿದ ಮರಗಳನ್ನು ತೆರವುಗೊಳಿಸಿದರು.

ಹೆಬ್ಬಾಳ ಬಳಿ ಅಪಘಾತ ‌
ಮಳೆಗೆ ಹೆಬ್ಬಾಳ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಕ್ಯಾಂಟರ್, ಲಾರಿ, ಪೊಲೀಸ್ ವ್ಯಾನ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿವೆ. ಘಟನೆಯಲ್ಲಿ ಲಾರಿ ಚಾಲಕನಿಗೆ ಗಾಯಗಳಾಗಿವೆ.

ಮಳೆ ಹೆಚ್ಚಾದರೆ ಅಕ್ಕಪಕ್ಕದ ನಿವಾಸಿಗಳ ಸ್ಥಳಾಂತರ
ಬೆಂಗಳೂರು: ನಗರದಲ್ಲಿ ಬುಧವಾರ ಬೆಳಿಗ್ಗೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಶಾಂತಲಾನಗರ ವಾರ್ಡ್ ಕಟ್ಟಡ ನಿರ್ಮಾಣಕ್ಕೆ ತೆಗೆದಿದ್ದ ಪಾಯದಲ್ಲಿ ನೀರು ತುಂಬಿ, ಪಕ್ಕದ ರಸ್ತೆ ಕುಸಿದಿದೆ. ಎರಡು ಹಿಟಾಚಿ ಯಂತ್ರಗಳೂ ಗುಂಡಿಯಲ್ಲಿ ಸಿಲುಕಿಕೊಂಡಿವೆ. ಅಕ್ಕ ಪಕ್ಕದ ಮನೆಗಳೂ ಅಪಾಯಕ್ಕೆ ಸಿಲುಕಿವೆ.

ಹೇಯ್ನ್ಸ್‌ರಸ್ತೆ ಬಳಿ ಈ ಘಟನೆ ನಡೆದಿದ್ದು, ಈ ಪ್ರದೇಶಕ್ಕೆ ಮೇಯರ್‌ ಎಂ.ಗೌತಮ್‌ ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು. ‘ಅಕ್ಕ ಪಕ್ಕದ ಮನೆಗಳಿಗೆ ಹಾನಿ ಉಂಟಾಗದಂತೆ ತಡೆಯಲು ಬೆಸ್ಕಾಂ ಹಾಗೂ ಜಲಮಂಡಳಿ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನಿವೇಶನದ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ, ರಾತ್ರಿ ವೇಳೆ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಬೇಕು. ಮಳೆ ಹೆಚ್ಚಾದರೆ ಸ್ಥಳೀಯ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಬೇಕು. ಕುಸಿದ ಜಾಗದ ಸುತ್ತಮುತ್ತಲಿನ ಮನೆಗಳಿಗೂ ನೋಟೀಸ್ ನೀಡಬೇಕು’ ಎಂದು ಮೇಯರ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಟ್ಟಡ ನಿರ್ಮಾಣಕ್ಕಾಗಿ ರಸ್ತೆ ಅಂಚಿನವರೆಗೂ ಪಾಯ ಅಗೆದಿದ್ದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಯರ್‌ ಆದೇಶ ಮಾಡಿದರು.

ಕೋರಮಂಗಲ ಮನೆಗಳು ಜಲಾವೃತ:ಮಳೆಯಿಂದ ಕೋರಮಂಗಲದ ಕೆಲವೆಡೆ ಪ್ರದೇಶಗಳು ಜಲಾವೃತವಾಗಿವೆ. ಕೋರಮಂಲ 5ನೇ ಮತ್ತು 6ನೇ ಬ್ಲಾಕ್‌ಗಳಿಗೆ ಮೇಯರ್‌, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಹಾಗೂ ಶಾಸಕ ರಾಮಲಿಂಗಾ ರೆಡ್ಡಿ, ಉಪ ಮೇಯರ್‌ ರಾಮಮೋಹನ ರಾಜು, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್, ಸ್ಥಳೀಯ ಪಾಲಿಕೆ ಸದಸ್ಯ ಚಂದ್ರಪ್ಪ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು.

ಕೋರಮಂಗಲ, ಎಚ್.ಎಸ್.ಆರ್ ಲೇಔಟ್ ಪ್ರದೇಶಗಳಲ್ಲಿ ಮಳೆ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.

ಎಚ್.ಎಸ್.ಆರ್ ಲೇಔಟ್ ಹಾಗೂ ಹೆಚ್.ಎಸ್.ಆರ್ ಸೆಕ್ಟರ್ 11 ಮತ್ತು 15ರ ರಸ್ತೆ ಮೇಲೆ ನಿಂತಿದ್ದ ಮಳೆ ನೀರನ್ನು ಹೈಪ್ರೆಷರ್‌ ಪಂಪ್ ಬಳಸಿ ಹೊರ ಹಾಕಲಾಗಿದೆ. ಬೊಮ್ಮನಹಳ್ಳಿಯ ಬಿ.ಕೆ.ಎಲ್ ಕಾಲೊನಿ, ವಿಶ್ವ ಪ್ರಿಯ ಲೇಔಟ್‌ನ ಜಯಶ್ರೀ ಲೇಔಟ್, ಬಾಗಲಗುಂಟೆ, ಬನಶಂಕರಿ ಮೊದಲನೇ ಹಂತದ ಶ್ರೀನಿವಾಸನಗರ, ಕೋಣನಕುಂಟೆ ಕ್ರಾಸ್, ಮುರುಗೇಶ್ ಪಾಳ್ಯದಲ್ಲಿ ನೀರು ನುಗ್ಗಿದೆ. ಪಂಪ್ ಗಳ ಮೂಲಕ ನೀರನ್ನು ಹೊರ ಹಾಕಲಾಗಿದೆ. ‘ಮಳೆ ಮುಗಿದ ಬಳಿಕ ಈ ರಸ್ತೆಯನ್ನು ದುರಸ್ತಿಪಡಿಸುತ್ತೇವೆ’ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಕೆಂಪಾಪುರ ಮುಖ್ಯರಸ್ತೆಯಲ್ಲಿ ರಾಜಕಾಲುವೆ ನೀರು ಮನೆಗಳಿಗೆ ನುಗ್ಗಿತ್ತು

ಅಬ್ಬರಿಸಿದ ಮಳೆ: ಮನೆಗಳಿಗೆ ನೀರು
ಹೆಸರಘಟ್ಟ:
ಬುಧವಾರ ಬೆಳಗಿನ ಜಾವ ಒಂದು ಘಂಟೆಗಳ ಕಾಲ ಗುಡುಗು ಸಿಡಿಲಿನಿಂದ ಅಬ್ಬರಿಸಿದ ಮಳೆಗೆ ಚಿಕ್ಕಬಾಣಾವರ ಗ್ರಾಮದ ಕೆಂಪಾಪುರ ಮುಖ್ಯರಸ್ತೆಯಲ್ಲಿರುವ ರಾಜಕಾಲುವೆ ತುಂಬಿ ಮನೆಗಳಿಗೆ ನೀರು ನುಗ್ಗಿತು.

‘ಗ್ರಾಮದ ಕೆಂಪಾಪುರ ಮುಖ್ಯರಸ್ತೆಯಲ್ಲಿ ಹಾದು ಹೋಗುವ ರಾಜಕಾಲುವೆಯ ಮೇಲೆ ಅನಧಿಕೃತವಾಗಿ ಕಟ್ಟಡ ನಿರ್ಮಿಸಲಾಗಿದೆ. ಈ ಕಟ್ಟಡ ನಿರ್ಮಾಣವಾದ ಮೇಲೆ ರಾಜಕಾಲುವೆಯಲ್ಲಿ ನೀರು ಹರಿಯದೆ ರಸ್ತೆ ಮತ್ತು ಮನೆಗಳಿಗೆ ನುಗ್ಗುತ್ತಿದೆ’ ಎಂದು ಗ್ರಾಮದ ನಿವಾಸಿ ಮಂಜುಳಾ ಅವರು ಬೇಸರ ವ್ಯಕ್ತಪಡಿಸಿದರು.

‘ನೀರು ಸರಾಗವಾಗಿ ಹರಿಯಲು ರಾಜಕಾಲುವೆಗೆ ತಡೆಗೋಡೆ ನಿರ್ಮಿಸಬೇಕು. ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಲಾಕ್ ಡೌನ್ ಮುಗಿದ ಕೂಡಲೇ ನ್ಯಾಯಾಲಯದಲ್ಲಿ ಈ ಬಗ್ಗೆ ದಾವೆ ಹೂಡಲಾಗುವುದು’ ಗ್ರಾಮದ ವಕೀಲ ಮಂಜುನಾಥ್ ಹೇಳಿದರು.

ಬಳಿಕ ಗ್ರಾಮ ಪಂಚಾಯಿತಿ ಸಿಬ್ಬಂದಿ ಜೆಸಿಬಿ ಮತ್ತು ಟ್ಯಾಕ್ಟರ್ ಮೂಲಕ ಕಸ ತೆಗೆಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.