ಬೆಂಗಳೂರು: ನಗರದ ಕೆಲವು ಪ್ರದೇಶಗಳಲ್ಲಿ ಭಾನುವಾರ ಸಂಜೆ ಬಿರುಸಿನ ಮಳೆಯಾಗಿದೆ. ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಕೆಲವೆಡೆ ರಸ್ತೆಯಲ್ಲೇ ನೀರು ಹರಿಯಿತು. ಇದರಿಂದ ವಾಹನಗಳ ಸಂಚಾರಕ್ಕೆ ತೊಡಕುಂಟಾಯಿತು.
ಫೀನಿಕ್ಸ್ ಮಾಲ್ ಬಳಿ ಮಳೆ ನೀರು ನಿಂತಿದ್ದರಿಂದ ಹೂಡಿ ಕಡೆಗೆ ವಾಹನ ಸಂಚಾರ ನಿಧಾನಗೊಂಡಿತು. ಕಸ್ತೂರಿನಗರದಿಂದ ರಾಮಮೂರ್ತಿನಗರದ ಕಡೆಗಿನ ರಸ್ತೆ ಜಲಾವೃತವಾಯಿತು. ನಾಗವಾರದಿಂದ ವೀರಣ್ಣಪಾಳ್ಯ ಕಡೆಗೆ ಹೋಗುವ ರಸ್ತೆ ಕಾಲುವೆಯಂತಾಯಿತು. ಸಿಬಿಐ ಕೆಳಸೇತುವೆ ಬಳಿ ನೀರು ನಿಂತಿದ್ದರಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಸಂಚರಿಸುವ ವಾಹನಗಳು ನಿಧಾನಗತಿಯಲ್ಲಿ ಸಾಗಿದವು.
ಪೀಣ್ಯ ಮೇಲ್ಸೇತುವೆ ಬಳಿ ನೀರು ನಿಂತಿದ್ದರಿಂದ ತುಮಕೂರು ರಸ್ತೆಯಲ್ಲಿ ಸಾಗುವ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಪುಲಕೇಶಿನಗರದ ಜಿಕೆ ವೇಲ್ ರಸ್ತೆಯಿಂದ ಹೈನ್ಸ್ ರಸ್ತೆಯ ಕಡೆಗೆ ಸಾಗುವ ವಾಹನಗಳಿಗೆ ಮಳೆ ನೀರು ಅಡ್ಡಿಯಾಯಿತು. ಸಿ.ಎಲ್. ಕ್ರಾಸ್‌ನಿಂದ ಜಯಮಹಲ್ ಕಡೆಗೆ ಸಾಗುವ ರಸ್ತೆಗಳ ಪರಿಸ್ಥಿತಿಯೂ ಇದೇ ರೀತಿ ಇತ್ತು. ಹೆಬ್ಬಾಳ ಕೆಳ ರ‍್ಯಾಂಪ್‌ನಿಂದ ವಿಮಾನ ನಿಲ್ದಾಣ ರಸ್ತೆಯ ಕಡೆಗೆ ಸಾಗುವಲ್ಲಿಯೂ ಮಳೆ ನೀರು ನಿಂತು ತೊಂದರೆ ಉಂಟಾಯಿತು. ಬೆಥೆಲ್ ಚರ್ಚ್‌ನಿಂದ ವೆಂಕಟಮ್ ಕೆಫೆ ಕಡೆಗೆ ಇರುವ ಸರ್ವಿಸ್ ರಸ್ತೆ ನೀರಿನಿಂದ ಆವೃತವಾಯಿತು. ಲೊಟ್ಟೆಗೊಲ್ಲಹಳ್ಳಿ ರೈಲ್ವೆ ಸೇತುವೆ ಬಳಿ ನೀರು ನಿಂತಿದ್ದರಿಂದ ಹೆಬ್ಬಾಳ ಕಡೆಗೆ ಸರಾಗ ಸಂಚಾರಕ್ಕೆ ಅಡ್ಡಿಯಾಯಿತು.
ಮಳೆ ವಿವರ: ಅಂಜನಾಪುರದಲ್ಲಿ 1.7 ಸೆಂ.ಮೀ., ವಿಶ್ವನಾಥ ನಾಗೇನಹಳ್ಳಿಯಲ್ಲಿ 1.6 ಸೆಂ.ಮೀ., ಬಾಣಸವಾಡಿಯಲ್ಲಿ 1.5 ಸೆಂ.ಮೀ., ಗೊಟ್ಟಿಗೆರೆಯಲ್ಲಿ 1.4 ಸೆಂ.ಮೀ., ಪುಲಕೇಶಿ ನಗರದಲ್ಲಿ 1.3 ಸೆಂ.ಮೀ., ಚೊಕ್ಕಸಂದ್ರದಲ್ಲಿ 1.1 ಸೆಂ.ಮೀ., ಬಾಗಲಗುಂಟೆಯಲ್ಲಿ 1.1 ಸೆಂ.ಮೀ., ಮನೋರಾಯನಪಾಳ್ಯದಲ್ಲಿ 1 ಸೆಂ.ಮೀ. ಮಳೆ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.