ADVERTISEMENT

ಪೀಣ್ಯ ದಾಸರಹಳ್ಳಿ | ಕಾಲುವೆಯಲ್ಲಿ ಕೊಂಬೆಗಳು; ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 19 ಮೇ 2025, 15:39 IST
Last Updated 19 ಮೇ 2025, 15:39 IST
ಉಕ್ಕಿ ಹರಿದ ರಾಜಕಾಲುವೆಯ ಕೊಳಚೆ ನೀರು, ಕೆಸರನ್ನು ತೆರವುಗೊಳಿಸುತ್ತಿರುವುದು
ಉಕ್ಕಿ ಹರಿದ ರಾಜಕಾಲುವೆಯ ಕೊಳಚೆ ನೀರು, ಕೆಸರನ್ನು ತೆರವುಗೊಳಿಸುತ್ತಿರುವುದು   

ಪೀಣ್ಯ ದಾಸರಹಳ್ಳಿ: ಸೋಮವಾರ ಮುಂಜಾನೆ ಸುರಿದ ಭಾರಿ ಮಳೆಯಿಂದಾಗಿ ರಾಜಗೋಪಾಲನಗರ ವಾರ್ಡ್ ಬಸಪ್ಪನ ಕಟ್ಟೆ ಹಿಂಭಾಗದ ಭೈರವೇಶ್ವರ ನಗರದಲ್ಲಿರುವ ರಾಜಕಾಲುವೆ ಉಕ್ಕಿ ಹರಿದು ರಸ್ತೆ ಮತ್ತು ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.

'150ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ದವಸ ಧಾನ್ಯಗಳು, ಬಟ್ಟೆ, ಪೀಠೋಪಕರಣಗಳು ಹಾಳಾಗಿವೆ. ರಾತ್ರಿಯಿಂದ ನೀರನ್ನು ಹೊರಗೆ ಹಾಕಿ ಸಾಕಾಗಿದೆ' ಎಂದು ಸ್ಥಳೀಯ ನಿವಾಸಿ ಜಿ.ವಿ.ದೊಡ್ಡ ನಾಗಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ಪಾರ್ಕ್‌ನಲ್ಲಿದ್ದ ಮರಗಳ ಕೊಂಬೆಗಳನ್ನು ಕಡಿದು ಭೈರವೇಶ್ವರ ನಗರದ 2ನೇ ಎ ಮುಖ್ಯರಸ್ತೆಯಲ್ಲಿರುವ ಈ ರಾಜಕಾಲುವೆಯಲ್ಲಿ ಹಾಕಲಾಗಿದೆ. ಈವರೆಗೆ ಅವುಗಳನ್ನು ತೆರವುಗೊಳಿಸಿಲ್ಲ. ಹೀಗಾಗಿ ಮಳೆ ನೀರು ಸರಾಗವಾಗಿ ಹರಿಯದೆ ಅಂಗಡಿಗಳಿಗೆ, ಅಕ್ಕಪಕ್ಕದ ಮನೆಗಳಿಗೆಲ್ಲ ನುಗ್ಗಿದೆ. ವಿದ್ಯುತ್ ಸಂಪರ್ಕವೂ ಕಡಿತವಾಗಿದೆ' ಎಂದು ಅಂಗಡಿ ಮಾಲೀಕ ಹಾಲಪ್ಪ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಇಲ್ಲಿವರೆಗೂ ಅಧಿಕಾರಿಗಳು ಈ ಕಡೆ ಬಂದಿರಲಿಲ್ಲ. ಈಗ ಅಧಿಕಾರಿಗಳು ಬಂದು ರಾಜಕಾಲುವೆಯಲ್ಲಿದ್ದ ಕೊಂಬೆಗಳನ್ನು ತೆಗೆದಿದ್ದಾರೆ. ರಸ್ತೆ, ಮೋರಿಯಲ್ಲಿದ್ದ ನೀರು ಈಗ ಹರಿಯುತ್ತಿದೆ. ಆದರೂ ಕೂಡ ರಸ್ತೆಯೆಲ್ಲ ಕೆಸರುಮಯ. ಓಡಾಡಲು ತೊಂದರೆಯಾಗಿದೆ' ಎಂದು ಸ್ಥಳೀಯ ನಿವಾಸಿ ಅಣ್ಣಯ್ಯಪ್ಪ ದೂರಿದರು.

ದಾಸರಹಳ್ಳಿ ಸಮೀಪದ ಎಜಿಬಿ ಬಡಾವಣೆಯಲ್ಲಿ ಕಾರಿನ ಮೇಲೆ ಮರ ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.