ADVERTISEMENT

ಬೆಂಗಳೂರಿಗೆ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ: ಸ್ಕೈಮ್ಯಾಟ್‌ ಮುನ್ನೆಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 8:59 IST
Last Updated 7 ಜೂನ್ 2019, 8:59 IST
   

ಬೆಂಗಳೂರು:ಮುಂದಿನ 24ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಭಾರಿ ಬೀಳಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮ್ಯಾಟ್‌ ಹೇಳಿದೆ.

ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆ ನಗರದಲ್ಲಿ ಅವಾಂತರಗಳನ್ನು ಸೃಷ್ಟಿಸುತ್ತಲೇ ಇದೆ. ಗುರುವಾರ ರಾತ್ರಿ ಬಂದ ಬಿರುಗಾಳಿ ಮಳೆಗೆ ನಗರದ ಹಲವೆಡೆ ಬೃಹತ್‌ ಮರಗಳು ಹಾಗೂ ವಿದ್ಯುತ್‌ ಕಂಬಗಳು ನೆಲಕ್ಕೊರಗಿವೆ. ಕಾರು, ಆಟೋ, ಬೈಕ್‌ ಸೇರಿದಂತೆ ಹಲವು ವಾಹನಗಳು ಹಾನಿಗೊಳಗಾಗಿವೆ. ಇದಾದ ಬೆನ್ನಲ್ಲೇ ಮತ್ತೆ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.

ಮಾನ್ಸೂನ್‌ ಮಾರುತಗಳು ಸಮೀಪದಲ್ಲಿದ್ದು, ಇನ್ನಷ್ಟೇ ಕೇರಳಕ್ಕೆ ಪ್ರವೇಶ ಪಡೆಯಲಿವೆ. ಆದ್ದರಿಂದ, ಕೇರಳ ಮತ್ತು ಕರ್ನಾಟಕ ಎರಡೂ ರಾಜ್ಯಗಳಲ್ಲಿ ಇದರ ಪರಿಣಾಮ ಉಂಟಾಗಲಿದೆ. ಬೆಂಗಳೂರು ನಗರದಲ್ಲಿಯೂ ಉತ್ತಮ ಮಳೆ ಬೀಳಲಿದೆ ಎಂದು ಸ್ಕೈಮ್ಯಾಟ್‌ ಹೇಳಿದೆ.

ಪ್ರಸ್ತುತ ವರ್ಷ ಬೆಂಗಳೂರು ನಗರದಲ್ಲಿ ಪೂರ್ವ ಮುಂಗಾರು ಉತ್ತಮವಾಗಿ ಆಗಿದೆ. ಒಂದು ವಾರದಿಂದ ಬಿಟ್ಟು ಬಿಟ್ಟು ಮಳೆ ಬೀಳುತ್ತಿದೆ. ಹಿಂದಿನ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ 20 ಮಿ.ಮೀ. ಮಳೆ ಬಿದ್ದಿದೆ ಎಂದು ಅದು ವರದಿ ಮಾಡಿದೆ.

ಜೂನ್‌ನಲ್ಲಿ ಬೆಂಗಳೂರಿನ ಮಾಸಿಕ ಸರಾಸರಿ ಮಳೆ 89 ಮಿ.ಮೀ.ಆಗಿದ್ದು, ಜೂನ್‌ 7ರ ವರೆಗೆ ಈಗಾಗಲೇ 63 ಮಿ.ಮೀ. ಮಳೆಯಾಗಿದೆ. ಮುಂದಿನ 24ರಿಂದ 48 ಗಂಟೆಗಳವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಬೀಳುವ ನಿರೀಕ್ಷೆ ಇದೆ. ಆದ್ದರಿಂದ ಪ್ರಸಕ್ತ ವರ್ಷ ಜೂನ್ 15ಕ್ಕೂ ಮೊದಲು ಬೆಂಗಳೂರು ತನ್ನ ಮಾಸಿಕ ಸರಾಸರಿ ಮಳೆಯ ಅಂಕಿ–ಅಂಶಗಳನ್ನು ಮೀರಿಸುವ ಸಾಧ್ಯತೆ ಹೆಚ್ಚು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.