ಬೆಂಗಳೂರು: ನಗರದ ವಿವಿಧೆಡೆ ಶನಿವಾರ ಬಿರುಸಿನಿಂದ ಮಳೆಯಾಗಿದೆ. ಚರಂಡಿ ವ್ಯವಸ್ಥೆ ಸರಿ ಇಲ್ಲದೇ ಹಲವೆಡೆ ನೀರು ರಸ್ತೆಯಲ್ಲೇ ಹರಿದಿದೆ. ಇದರಿಂದ ವಾಹನ ಸರಾಗ ಸಂಚಾರಕ್ಕೆ ತೊಡಕುಂಟಾಯಿತು. ಕೆಲವು ಬಡಾವಣೆಗಳಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿದೆ.
ಬಾಣಸವಾಡಿ ಮತ್ತು ಇಂದಿರಾನಗರದಲ್ಲಿ ಮರ ಮುರಿದು ಬಿದ್ದಿದೆ. ಯಾರಿಗೂ ಜೀವಾಪಾಯ ಉಂಟಾಗಿಲ್ಲ. ಪುಟ್ಟೇಣಹಳ್ಳಿಯಲ್ಲಿ ವೆಂಕಟಾದ್ರಿ ಅಪಾರ್ಟ್‌ಮೆಂಟ್‌ನ ಆವರಣಗೋಡೆ ಕುಸಿದಿದೆ. ಸಾಯಿ ಲೇಔಟ್‌ನಲ್ಲಿ ಮನೆಗಳು ಜಲಾವೃತಗೊಂಡವು. ಬನ್ನೇರುಘಟ್ಟೆ ರಸ್ತೆಯ ಮೈಕೋ ಲೇಔಟ್‌ನಲ್ಲಿ 15 ಮನೆಗಳಿಗೆ ನೀರು ನುಗ್ಗಿದೆ.
ರೆಸಿಡೆನ್ಸಿ ರಸ್ತೆ, ಯಶವಂತಪುರ ರಸ್ತೆಗಳಲ್ಲಿ ವಾಹನಗಳು ತಾಸುಗಟ್ಟಲೆ ನಿಲ್ಲುವಂತಾಯಿತು. ಕೆ.ಆರ್. ವೃತ್ತದಲ್ಲಿ ನೀರು ನಿಂತಿದ್ದರಿಂದ ಪೊಲೀಸ್ ಕಾರ್ನರ್ ಜಂಕ್ಷನ್ ಕಡೆಗೆ ವಾಹನ ಸಂಚಾರ ನಿಧಾನಗತಿಯಾಗಿತ್ತು. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಸಾರಕ್ಕಿ ಮೆಟ್ರೊದಿಂದ (ಪುನೀತ್ ರಾಜ್‌ಕುಮಾರ್ ರಸ್ತೆ) ಬನ್ನೇರುಘಟ್ಟ ರಸ್ತೆ ಕಡೆಗೆ, ರಾಮಮೂರ್ತಿ ನಗರದಿಂದ ಟಿನ್ ಫ್ಯಾಕ್ಟರಿ ಕಡೆಗೆ, ಕೋರಮಂಗಲದಿಂದ ದೊಮ್ಮಲೂರು ಮೇಲ್ಸೇತುವೆ ಕಡೆಗೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.
ಇದೇ ರೀತಿ ಎಚ್‌ಎಸ್‌ಬಿಸಿ ಜಂಕ್ಷನ್, ಜಿ.ಡಿ. ಮಾರಾ ಜಂಕ್ಷನ್, ಮಾನ್ಯತಾ ಟೆಕ್‌ಪಾರ್ಕ್, ಆಡುಗೋಡಿ, ಹುಳಿಮಾವು ಗೇಟ್, ಅನಿಲ್ ಕುಂಬ್ಳೆ ಜಂಕ್ಷನ್, ಜಾಲಹಳ್ಳಿ ಕ್ರಾಸ್, ವಸಂತ ನಗರ, ಖೋಡೆ ವೃತ್ತ, ಐಟಿಪಿಎಲ್ ಮುಖ್ಯ ರಸ್ತೆಯ ಹೂಡಿ, ಇಬ್ಬಲೂರು ಜಂಕ್ಷನ್, ಬನಶಂಕರಿ, ವಿದ್ಯಾಶಿಲ್ಪ ಸರ್ವಿಸ್ ರಸ್ತೆ, ಎಎಸ್‌ಸಿ ಜಂಕ್ಷನ್, ಅಯೋಧ್ಯ ಜಂಕ್ಷನ್, ಟ್ಯಾನರಿ ರಸ್ತೆ, ವೀರಣ್ಣಪಾಳ್ಯ ಜಂಕ್ಷನ್, ಕಮರ್ಷಿಯಲ್ ಸ್ಟ್ರೀಟ್, ಆನೆಪಾಳ್ಯ, ಹೋಪ್‌ಫಾರ್ಮ್ ಸಿಗ್ನಲ್, ವೈಟ್‌ಫೀಲ್ಡ್, ವಿಂಡ್ಸನ್ ಮ್ಯಾನರ್ ರೈಲ್ವೆ ಸೇತುವೆ ಬಳಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಯಿತು.
ಜೆ ಪಿ ನಗರ, ಶ್ರೀನಿವಾಗಿಲು, ಗೋಪಾಲನ್ ಮಾಲ್, ಮೇಖ್ರಿ ವೃತ್ತದ ಕೆಳ ಸೇತುವೆ, ಎಂ.ಎಸ್. ಪಾಳ್ಯ, ಕಲ್ಯಾಣ ನಗರ, ಪಣತ್ತೂರು, ದೇವರ ಬೀಸನಹಳ್ಳಿ, ಜೆ.ಬಿ. ನಗರ. ಗುಂಜೂರು, ಹುಣಸಮಾರನಹಳ್ಳಿ ಸರ್ವೀಸ್ ರಸ್ತೆ, ಹೆಬ್ಬಾಳ, ವೀರಣ್ಣ ಪಾಳ್ಯ ಸಹಿತ ಹಲವೆಡೆ ರಸ್ತೆ ಮೇಲೆ ನೀರು ಹರಿದಿದೆ.
ಕಂಟ್ರೋಲ್ ರೂಂಗೆ ಭೇಟಿ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರರಾವ್ ಅವರು ಶನಿವಾರ ರಾತ್ರಿ ಕಂಟ್ರೋಲ್ ರೂಂಗೆ ಭೇಟಿ ನೀಡಿ ಮಳೆಯಿಂದ ಉಂಟಾದ ಅನಾಹುತಗಳ ಬಗ್ಗೆ ಮಾಹಿತಿ ಪಡೆದರು. ಮುರಿದು ಬಿದ್ದ ಮರಗಳನ್ನು ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಚಾರ ದಟ್ಟಣೆ: ಪರದಾಟ
ಭಾರಿ ಮಳೆಯಿಂದ ನಗರದ ಹಲವು ಕಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಮೆಜೆಸ್ಟಿಕ್ ರಾಜಾಜಿನಗರ ಯಶವಂತಪುರ ಗೊರಗುಂಟೆಪಾಳ್ಯ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ದೀಪಾಂಜಲಿನಗರ ಕೆಂಗೇರಿ ಭಾಗದಲ್ಲಿ ಸಂಚಾರದ ದಟ್ಟಣೆ ಉಂಟಾಗಿತ್ತು. ದಟ್ಟಣೆಯಲ್ಲಿ ಆಂಬುಲೆನ್ಸ್‌ಗಳು ಸಿಲುಕಿದ್ದವು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲತ್ತ ನೈಟ್ ರೈಡರ್ಸ್ ತಂಡಗಳ ನಡುವೆ ಶನಿವಾರ ಐಪಿಎಲ್ ಪಂದ್ಯ ವೀಕ್ಷಣೆಗೆಂದು ಭಾರಿ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಸೇರಿದ್ದರು. ಸಂಜೆ ವೇಳೆಗೆ ಜೋರು ಮಳೆ ಆರಂಭವಾಗಿದ್ದರಿಂದ ಕ್ರೀಡಾಂಗಣದ ಸುತ್ತಮುತ್ತ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಮುರಿದು ಬಿದ್ದ 8 ಮರ 20 ಟೊಂಗೆ
ಶನಿವಾರ ಸುರಿದ ಭಾರಿ ಮಳೆಗೆ ನಗರದ ವಿವಿಧೆಡೆ 8 ಮರಗಳು 20 ಟೊನ್ಗೆಗಳು ಮುರಿದು ಬಿದ್ದಿವೆ. 4 ಮರ ಹಾಗೂ 10 ಟೊನ್ಗೆಗಳನ್ನು ರಾತ್ರಿಯೇ ತೆರವುಗೊಳಿಸಲಾಗಿದೆ. ಉಳಿದವುಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.