ADVERTISEMENT

ಹೆಬ್ಬಾಳ ಮೇಲ್ಸೇತುವೆ: ಮುಗಿಯದ ಕಾಮಗಾರಿ, ಸವಾರರಿಗೆ ಕಿರಿಕಿರಿ‌

ಹೆಬ್ಬಾಳ ಮೇಲ್ಸೇತುವೆ ಲೂಪ್‌ ಆಗಸ್ಟ್‌ನಲ್ಲಿ ಸಂಚಾರಕ್ಕೆ ಅನುವು: ಬಿಡಿಎ

ಕೆ.ಎಸ್.ಸುನಿಲ್
Published 17 ಜೂನ್ 2025, 1:25 IST
Last Updated 17 ಜೂನ್ 2025, 1:25 IST
ನಗರದ ಹೆಬ್ಬಾಳ ಮೇಲ್ಸೇತುವೆ ಬಳಿ ಲೂಪ್‌ (ಪಥ) ನಿರ್ಮಾಣ ಕಾಮಗಾರಿ‌ ನಡೆಯುತ್ತಿದೆ. ಪ್ರಜಾವಾಣಿ ಚಿತ್ರ ಬಿ.ಕೆ.ಜನಾರ್ದನ್‌
ನಗರದ ಹೆಬ್ಬಾಳ ಮೇಲ್ಸೇತುವೆ ಬಳಿ ಲೂಪ್‌ (ಪಥ) ನಿರ್ಮಾಣ ಕಾಮಗಾರಿ‌ ನಡೆಯುತ್ತಿದೆ. ಪ್ರಜಾವಾಣಿ ಚಿತ್ರ ಬಿ.ಕೆ.ಜನಾರ್ದನ್‌    

ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ ಬಳಿ ವಾಹನ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ನಡೆಯುತ್ತಿರುವ ಹೊಸ ಲೂಪ್‌ (ಪಥ) ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ವಾಹನ ಸವಾರರಿಗೆ ನಿತ್ಯವೂ ಕಿರಿಕಿರಿ ಉಂಟಾಗಿದೆ.

ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಪ್ರಾರಂಭವಾಗಿ ಕೆ.ಆರ್‌. ಪುರ ಲೂಪ್‌ನೊಂದಿಗೆ ಸೇರಿಕೊಳ್ಳುವ ಈ ರ‍್ಯಾಂಪ್‌ನಿಂದ, ಮೇಖ್ರಿ ಸರ್ಕಲ್ ಕಡೆಗೆ ಹೋಗುವ ವಾಹನ ಸವಾರರಿಗೆ ಅನುಕೂಲವಾಗಲಿದೆ. ಇದರಿಂದ ಸಂಚಾರ ದಟ್ಟಣೆ ಸ್ವಲ್ಪ ಕಡಿಮೆ ಆಗಲಿದೆ. ಅಲ್ಲದೆ ಈ ಲೂಪ್‌ ನಾಗವಾರ ಕಡೆಯಿಂದ ಬರುವ ವಾಹನಗಳ ಸಂಚಾರವನ್ನೂ ಸುಗಮಗೊಳಿಸಲಿದೆ.

ಬಿಡಿಎ ಅಧಿಕಾರಿಗಳ ಹೊಸ ಗಡುವಿನ ಪ್ರಕಾರ, ಆಗಸ್ಟ್ ವೇಳೆಗೆ ಎಲ್ಲ ಕಾಮಗಾರಿಗಳು ಪೂರ್ಣಗೊಂಡು, ವಾಹನ ಸಂಚಾರ ಆರಂಭವಾಗಲಿದೆ.

ADVERTISEMENT

2022ರ ಅಕ್ಟೋಬರ್‌ನಲ್ಲಿ ಕಾಮಗಾರಿ ಆರಂಭವಾಗಿತ್ತು. ಸಂಚಾರ ವಿಭಾಗದ ಪೊಲೀಸ್‌ ಅಧಿಕಾರಿಗಳ ಪ್ರಕಾರ, ಲೂಪ್‌ ನಿರ್ಮಾಣ ಕಾರ್ಯ 2024ಕ್ಕೇ ಪೂರ್ಣಗೊಳ್ಳಬೇಕಿತ್ತು. 2025ರ ಮೇ ಎರಡನೇ ವಾರದೊಳಗೆ ಈ ಲೂಪ್ ಕಾರ್ಯಾರಂಭ ಮಾಡಲಿದೆ ಎಂದು ಬಿಡಿಎ ತಿಳಿಸಿತ್ತು. ಬಳಿಕ ಗಡುವನ್ನು ಜೂನ್‌ಗೆ ವಿಸ್ತರಿಸಲಾಗಿತ್ತು. ಈಗ ಮತ್ತೆ ಆಗಸ್ಟ್‌ಗೆ ವಿಸ್ತರಿಸಲಾಗಿದೆ.

ಮೊದಲ ಹಂತವಾಗಿ ಕೆ.ಆರ್.ಪುರ ಲೂಪ್ ನಿರ್ಮಿಸುವ ಕೆಲಸ ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಮಂದಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದನ್ನು ಗಮನಿಸಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಹಲವು ಬಾರಿ ಗಡುವು ವಿಧಿಸಿದರೂ ಕಾಮಗಾರಿ ಮುಗಿದಿಲ್ಲ.

ರೈಲ್ವೆ ಹಳಿಯ ಮೇಲಿನ ಮೇಲ್ಸೇತುವೆಗೆ ಗರ್ಡರ್‌ ಅಳವಡಿಸಲು ಸಾಧ್ಯವಾಗಿರಲಿಲ್ಲ. ರೈಲ್ವೆ ಇಲಾಖೆಯಿಂದ ಅನುಮತಿ ಪಡೆಯಲು ಸಮಯ ಬೇಕಾಯಿತು ಎಂದು ಬಿಡಿಎ ಸಮಜಾಯಿಷಿ ನೀಡಿದೆ.

ಬೆಂಗಳೂರು ಉತ್ತರ ಭಾಗದಿಂದ ನಗರದೊಳಗೆ ಪ್ರವೇಶಿಸಲು ಹೆಬ್ಬಾಳ ಮಾರ್ಗ ಪ್ರಮುಖವಾಗಿದೆ. ಇದನ್ನು ಆಧರಿಸಿಯೇ ಕೆ.ಆರ್.ಪುರ ಲೂಪ್‌ ಅನ್ನು ಮೊದಲು ಪೂರ್ಣಗೊಳಿಸಿ ಆ ಭಾಗದಿಂದ ನಗರಕ್ಕೆ ಬರಲು ಅವಕಾಶ ನೀಡಲು ನಿರ್ಧರಿಸಲಾಗಿತ್ತು. ದಿನದ ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರೂ ನಿರೀಕ್ಷೆಯಂತೆ ಕೆಲಸ ಸಾಗುತ್ತಿಲ್ಲ.

ಸುಮಾರು 700 ಮೀಟರ್ ಉದ್ದದ ಈ ಲೂಪ್‌ ಅನ್ನು 26 ಕಂಬಗಳ ಆಧಾರದ ಮೇಲೆ 25 ಭಾಗಗಳಾಗಿ ನಿರ್ಮಿಸಲಾಗಿದೆ. ಜಂಕ್ಷನ್‌ನಲ್ಲಿರುವ ರೈಲ್ವೆ ಹಳಿಯ ಮೇಲೆ 99 ಗರ್ಡರ್‌ಗಳನ್ನು ಅಳವಡಿಸಲಾಗಿದೆ.

‘ಎಲ್ಲ ಗರ್ಡರ್‌ಗಳ (ತೊಲೆ) ನಿರ್ಮಾಣ ಪೂರ್ಣಗೊಂಡಿದ್ದು, ಕಾಂಕ್ರೀಟ್‌ ಕೆಲಸ ನಡೆಯುತ್ತಿದೆ. ಕಾಮಗಾರಿ ಅಂತಿಮ ಹಂತದಲ್ಲಿದೆ. ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ರೈಲ್ವೆ ಹಳಿಯವರೆಗಿನ ಡೆಕ್ ಕಾಸ್ಟಿಂಗ್ ಮತ್ತು ರಸ್ತೆ ನಿರ್ಮಾಣ ಕಾರ್ಯ ಮುಗಿದಿದೆ. ಕೆ.ಆರ್.ಪುರ ಲೂಪ್‌ವರೆಗಿನ ಉಳಿದ ಭಾಗದ ಕಾಮಗಾರಿ ಆಗಸ್ಟ್‌ಗೆ ಪೂರ್ಣಗೊಳ್ಳಲಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

ಈ ಹಿಂದೆ ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಎಸ್ಟೀಮ್ ಮಾಲ್ ತನಕ ಲೂಪ್‌ ನಿರ್ಮಿಸಲು ಉದ್ದೇಶಿಸಲಾಗಿತ್ತು. ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳಿಗೆ ಮೀಸಲಾದ ರಸ್ತೆಯನ್ನು ನಿರ್ಮಿಸುವುದು ಗುರಿಯಾಗಿತ್ತು. ಆದರೆ, ಕಾಮಗಾರಿ ವಿಳಂಬ ಮತ್ತು ಸಂಚಾರ ದಟ್ಟಣೆ ಕಾರಣದಿಂದ ಯೋಜನೆ ಕೈಬಿಡಲಾಯಿತು.

ಎರಡನೇ ಹಂತದಲ್ಲಿ ತುಮಕೂರಿಗೆ

ಎರಡನೇ ಹಂತದಲ್ಲಿ ಎಸ್ಟೀಮ್ ಮಾಲ್ ಮತ್ತು ತುಮಕೂರು ರಸ್ತೆಯ ಬಳಿ ಇರುವ ಸರ್ವಿಸ್ ರಸ್ತೆಯಿಂದ ಮೇಖ್ರಿ ಸರ್ಕಲ್ ಕಡೆಗೆ ಹೋಗುವ ವಾಹನಗಳಿಗಾಗಿ ತುಮಕೂರು ರಸ್ತೆ ಕಡೆಗೆ ಹೋಗುವ ಲೂಪ್ ಅನ್ನು ಜೋಡಿಸಲು ನಿರ್ಧರಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.