ADVERTISEMENT

ದಾಸರಹಳ್ಳಿ: ಅನುದಾನ ಬಿಡುಗಡೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 5:24 IST
Last Updated 29 ಜುಲೈ 2021, 5:24 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ₹110.75 ಕೋಟಿ ಅನುದಾನ ಬಿಡುಗಡೆ ಮಾಡಲು ನೀಡಿದ್ದ ಆದೇಶ ಪಾಲಿಸಿದ ವರದಿಯನ್ನು ಒಂದು ತಿಂಗಳಲ್ಲಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ವಕೀಲ ಅಶ್ವತ್ಥನಾರಾಯಣ ಚೌಧರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು. ಅನುದಾನ ಬಿಡುಗಡೆ ಸಂಬಂಧ ಸಲ್ಲಿಸಿದ್ದ ಪ್ರಮಾಣಪತ್ರ ಸರಿಯಿಲ್ಲ ಎಂದು ಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿತು.

ದಾಸರಹಳ್ಳಿ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ₹26.80 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಸರ್ಕಾರಿ ವಕೀಲರು ಮೆಮೊ ಸಲ್ಲಿಸಿದರು. ಆದರೆ, 2019ರಲ್ಲಿ ₹28.17 ಕೋಟಿ ಬಿಡುಗಡೆಯಾಗಿದ್ದು, ಬಳಿಕ ಯಾವುದೇ ಹಣ ಬಿಡುಗಡೆಯಾಗಿಲ್ಲ ಎಂದು ಬಿಬಿಎಂಪಿ ಪರ ವಕೀಲರು ತಿಳಿಸಿದ್ದರು. ಈ ಹಿಂದೆ ಪೀಠ ನೀಡಿರುವ ಆದೇಶದಂತೆ ₹110.75 ಕೋಟಿಯನ್ನು ಆ.23ರೊಳಗೆ ಬಿಡುಗಡೆ ಮಾಡಬೇಕು ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಆ.28ಕ್ಕೆ ಮುಂದೂಡಿತು.

ADVERTISEMENT

ದಾಸರಹಳ್ಳಿ ವಲಯದಲ್ಲಿ 110 ಹಳ್ಳಿ ಯೋಜನೆಯಡಿ ಒಳಚರಂಡಿ ಮತ್ತು ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಸಲಾಗಿದೆ. ರಸ್ತೆಗಳ ಮರು ನಿರ್ಮಾಣಕ್ಕೆ ₹110.75 ಕೋಟಿ ಬಿಡುಗಡೆ ಮಾಡುವಂತೆ ಪಾಲಿಕೆ ಆಯುಕ್ತರು ಕೋರಿದ್ದರು. ಹಣ ಬಿಡುಗಡೆ ಮಾಡದ ಕಾರಣ ರಸ್ತೆಗಳಲ್ಲಿ ವಾಹನ ಸಂಚಾರ ಸಾಧ್ಯವಾಗದೆ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅರ್ಜಿದಾರರು ತಿಳಿಸಿದ್ದರು.

ಅರ್ಜಿ ಪರಿಗಣಿಸಿದ್ದ ಪೀಠ, ಅಗತ್ಯ ಹಣ ಬಿಡುಗಡೆ ಮಾಡುವಂತೆ ಜೂನ್ 24ರಲ್ಲಿ ಆದೇಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.