ADVERTISEMENT

ಸರ್ಕಾರಕ್ಕೆ ನೋಟಿಸ್‌: ಹೈಕೋರ್ಟ್‌ ಆದೇಶ

ಮುತ್ತಗೋಡು ಆನೆ ಶಿಬಿರದ ಬಳಿ ರಾತ್ರಿ ಸಂಚಾರ ನಿಷೇಧ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 20:13 IST
Last Updated 23 ಜನವರಿ 2019, 20:13 IST

ಬೆಂಗಳೂರು: ‘ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಮುತ್ತುಗೋಡು ಆನೆ ಶಿಬಿರದ ಬಳಿ ಹಾದುಹೋಗುವ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಲು ನಿರ್ದೇಶಿಸಬೇಕು’ ಎಂದು ಕೋರಲಾಗಿರುವ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ನಗರದ ಎಚ್.ಸಿ. ಪ್ರಕಾಶ್ ಮತ್ತು ಎ.ಎಂ.ಮಹೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆ ಕಾರ್ಯದರ್ಶಿ, ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ಹಾಗೂ ಮೈಸೂರು ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಲಾಗಿದೆ.

ADVERTISEMENT

‘ವನ್ಯ ಜೀವಿಗಳ ಸರಂಕ್ಷಣೆಯ ದೃಷ್ಟಿಯಿಂದ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿನ ಮುತ್ತುಗೋಡು ಆನೆ ಶಿಬಿರದ ಬಳಿ ಹಾದುಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ-90ರ 11 ಕಿ.ಮೀ ಉದ್ದದ ರಸ್ತೆಯಲ್ಲಿ (ಮೈಸೂರು-ವಿರಾಜಪೇಟೆ ರಸ್ತೆ) ಸಂಜೆ 6ರಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರ ನಿಷೇಧ ಮಾಡಬೇಕು. ರಾಜ್ಯ ಹೆದ್ದಾರಿಗಳಲ್ಲಿ ಆನೆಗಳ ಸಾವು ಸಂಭವಿಸುವುದನ್ನು ತಡೆಯಲು ವಿಫಲರಾಗಿರುವ ಅಧಿಕಾರಿಗಳನ್ನು ಗುರುತಿಸಲು ತುರ್ತು ವಿಚಾರಣೆ ನಡೆಸಬೇಕು. ಆನೆಗಳ ಸಂರಕ್ಷಣೆ ದೃಷ್ಟಿಯಿಂದ ಪರ್ಯಾಯ ರಸ್ತೆ ನಿರ್ಮಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

‘11 ಕಿ.ಮೀ ಉದ್ದದ ರಸ್ತೆಯಲ್ಲಿ ವೇಗ ನಿಯಂತ್ರಣ ಉಪಕರಣ ಮತ್ತು ವೇಗ ನಿಯಂತ್ರಣ ಸೂಚನೆಯ ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದೂ ಮಧ್ಯಂತರ ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.