ADVERTISEMENT

ಮೂರು ತಿಂಗಳಲ್ಲಿ ‘ಚೈಲ್ಡ್‌ ಲಾಕ್‌’ ನಿಷ್ಕ್ರೀಯ

ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ವಾಗ್ದಾನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 20:23 IST
Last Updated 23 ಜನವರಿ 2019, 20:23 IST
   

ಬೆಂಗಳೂರು: ‘ಮುಂದಿನ ಮೂರು ತಿಂಗಳಲ್ಲಿ ರಾಜ್ಯದ ಎಲ್ಲ ಟ್ಯಾಕ್ಸಿ, ಕ್ಯಾಬ್‌ಗಳಲ್ಲಿ ಚೈಲ್ಡ್ ಲಾಕ್ ವ್ಯವಸ್ಥೆ ನಿಷ್ಕ್ರಿಯಗೊಳಿಸಲಾಗುವುದು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

‘ಚೈಲ್ಡ್ ಲಾಕ್ ವ್ಯವಸ್ಥೆ ನಿಷ್ಕ್ರಿಯಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಬೆಂಗಳೂರು ಪ್ರಸೂತಿ ಮತ್ತು ಸ್ತ್ರೀ ರೋಗ ಸೊಸೈಟಿ (ಬಿಎಸ್‌ಒಜಿ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ‘ಟ್ಯಾಕ್ಸಿ ಹಾಗೂ ಕ್ಯಾಬ್‌ಗಳಲ್ಲಿ ಚೈಲ್ಡ್ ಲಾಕ್ ವ್ಯವಸ್ಥೆ ನಿಷ್ಕ್ರಿಯಗೊಳಿಸಲು ರಾಜ್ಯ ಸರ್ಕಾರ ತಿದ್ದುಪಡಿ ನಿಯಮ ರೂಪಿಸಿ ಅಧಿಸೂಚನೆ ಹೊರಡಿಸಿದೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಸುಮಾರು 2.5 ಲಕ್ಷ ಟ್ಯಾಕ್ಸಿ ಹಾಗೂ ಕ್ಯಾಬ್‌ಗಳಿವೆ. ಆ ಪೈಕಿ ಈಗಾಗಲೇ 42 ಸಾವಿರ ಕ್ಯಾಬ್‌ಗಳಲ್ಲಿ ಚೈಲ್ಡ್ ಲಾಕ್ ವ್ಯವಸ್ಥೆಯನ್ನು ಈಗಾಗಲೇ ನಿಷ್ಕ್ರಿಯಗೊಳಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಉಳಿದ ಎಲ್ಲ ಕ್ಯಾಬ್‌ಗಳಲ್ಲಿ ಚೈಲ್ಡ್ ಲಾಕ್ ವ್ಯವಸ್ಥೆ ನಿಷ್ಕ್ರಿಯಗೊಳಿಸಲಾಗುವುದು’ ಎಂದು ವಿವರಿಸಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿದೆ.

ಚೈಲ್ಡ್‌ ಲಾಕ್‌ ವ್ಯವಸ್ಥೆ ದುರುಪಯೋಗ ತಡೆಗಟ್ಟಲು, ವಿಶೇಷವಾಗಿ ವಾಹನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಅನುಕೂಲವಾಗುವಂತೆ ಇದನ್ನು ನಿಷ್ಕ್ರಿಯಗೊಳಿಸಬೇಕು ಎಂಬ ಸಲಹೆಗಳು ಕೇಳಿಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.