ADVERTISEMENT

ವಸತಿ ಪ್ರದೇಶದಲ್ಲಿ ಕೋವಿಡ್ ಲ್ಯಾಬ್ ಬೇಡವೆಂದ ಪಿಐಎಲ್ ವಜಾ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 21:50 IST
Last Updated 31 ಜುಲೈ 2020, 21:50 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ವಸತಿ ಬಡಾವಣೆಯಲ್ಲಿ ಇರುವ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಅನುಮತಿ ರದ್ದುಗೊಳಿಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

‘ವಸತಿ ಪ್ರದೇಶದಲ್ಲಿ ಪ್ರಯೋಗಾಲಯ ತೆರೆಯಬಾರದು ಎಂದು ಹೇಳಲು ಯಾವುದೇ ಶಾಸನಬದ್ಧ ನಿಬಂಧನೆಗಳು ಇಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

ನಾಗರಬಾವಿ ನಿವಾಸಿಗಳಾದ ಎಸ್. ಗುಂಡಪ್ಪ ಮತ್ತು ವಿ. ಶಿವಮೂರ್ತಿ ಎಂಬುವರು ಅರ್ಜಿ ಸಲ್ಲಿಸಿದ್ದರು. ‘ನಾಗರಬಾವಿಯ ಎರಡು ಮುಖ್ಯ ರಸ್ತೆಯ ಬಳಿ ಖಾಸಗಿ ಪ್ರಯೋಗಾಲಯ ತೆರೆಯಲಾಗಿದೆ. ಸುತ್ತಮುತ್ತ 51 ಮನೆಗಳಿವೆ. ಪ್ರಯೋಗಾಲಯದ ಮುಂದೆ ದಿನವಿಡೀ ಜನ ಸರತಿಯಲ್ಲಿ ನಿಲ್ಲುತ್ತಿದ್ದಾರೆ.ಯಾವುದೇ ಸುರಕ್ಷತಾ ಕ್ರಮಗಳನ್ನು‍ಕೈಗೊಂಡಿಲ್ಲ’ ಎಂದು ಅರ್ಜಿದಾರರು ತಿಳಿಸಿದ್ದಾರೆ.‌

ADVERTISEMENT

‘ಸುತ್ತಮುತ್ತಲ ನಿವಾಸಿಗಳಿಗೆ ಸೋಂಕು ಹರಡುವ ಸಾಧ್ಯತೆ ಇರುವ ಕಾರಣ ಪ್ರಯೋಗಾಲಯಕ್ಕೆ ನೀಡಿರುವ ಅನುಮತಿ ರದ್ದುಪಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಅವರು ಕೋರಿದ್ದರು.

ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಇದ್ದರೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅಹವಾಲು ಸಲ್ಲಿಸಬೇಕು ಎಂದು ಅರ್ಜಿದಾರರಿಗೆ ಪೀಠ ತಿಳಿಸಿತು. ಯಾವುದೇ ಕುಂದುಕೊರತೆಗಳಿದ್ದರೆ ಸರಿಪಡಿಸಿಕೊಳ್ಳಲು ಪ್ರಯೋಗಾಲಯಕ್ಕೆ ಸೂಚನೆ ನೀಡುವಂತೆ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಪೀಠ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.