ADVERTISEMENT

ಪಾಂಡವಪುರದ ತಹಶೀಲ್ದಾರ್‌ಗಳಿಗೆ ಹೈಕೋರ್ಟ್‌ನಿಂದ ₹3 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2022, 3:14 IST
Last Updated 13 ಡಿಸೆಂಬರ್ 2022, 3:14 IST
   

ಬೆಂಗಳೂರು: ವೃದ್ಧೆಯೊಬ್ಬರ ಜಮೀನನ ಸರ್ವೇ ನಡೆಸಿ ಪೋಡಿ, ದುರಸ್ತಿ ಮಾಡುವಂತೆ ಎಂಟು ವರ್ಷಗಳ ಹಿಂದೆ ನೀಡಲಾಗಿದ್ದ ಹೈಕೋರ್ಟ್‌ ಆದೇಶವನ್ನು ಪಾಲಿಸುವಲ್ಲಿ ವಿಫಲರಾದ ಮಂಡ್ಯ ಜಿಲ್ಲೆ ಪಾಂಡವಪುರದ ಅಂದಿನ ತಹಶೀಲ್ದಾರ್‌ಗಳಿಗೆ ಹೈಕೋರ್ಟ್ ₹ 3 ಲಕ್ಷ ದಂಡ ವಿಧಿಸಿದೆ.

ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ, ‘ದಂಡದ ಮೊತ್ತವನ್ನು ಅರ್ಜಿದಾರರಿಗೆ ಒಂದು ತಿಂಗಳಲ್ಲಿ ಪಾವತಿಸಬೇಕು’ ಎಂದು ಆದೇಶಿಸಿದೆ.

‘ದಂಡದ ಮೊತ್ತವನ್ನು2014ರ ಜುಲೈ 24ರಿಂದ 2022ರ ಫೆಬ್ರುವರಿ 10ರವರೆಗೆ ಪಾಂಡವಪುರ ತಾಲ್ಲೂಕಿ ನಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ ಅಧಿಕಾರಿಗಳಿಂದಲೇ ವಸೂಲು ಮಾಡಬೇಕು. ಈ ವಿಚಾರವನ್ನು ಅವರ ಸೇವಾ ದಾಖಲೆಯಲ್ಲೂ ನಮೂದಿ ಸಬೇಕು.ಈ ಕುರಿತಂತೆ ನ್ಯಾಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ವಿರುದ್ಧ ಗಂಭೀರ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ನ್ಯಾಯಪೀಠ ಎಚ್ಚರಿಸಿದೆ.

ADVERTISEMENT

ಪ್ರಕರಣವೇನು?: ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕುರಹಳ್ಳಿ ಗ್ರಾಮದ ಪಾರ್ವತಮ್ಮ ಎಂಬುವರು ತಮಗೆ ಸೇರಿದ ಜಮೀನಿನ ಸರ್ವೇ ಹಾಗೂ ಪೋಡಿ ಮಾಡಿಕೊಡಲು ನಿರ್ದೇಶಿಸಬೇಕು ಎಂದು ಕೋರಿ 2014ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ 2014ರ ಜುಲೈ 24ರಂದು, ‘ಒಂಬತ್ತು ತಿಂಗಳಲ್ಲಿ ಅರ್ಜಿದಾರರಿಗೆ ಸೇರಿದ ಜಮೀನಿನ ಪೋಡಿ, ದುರಸ್ತಿ ಮಾಡಿಕೊಡಬೇಕು’ ಎಂದು ಕಂದಾಯ ಅಧಿಕಾರಿಗಳಿಗೆ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.