ADVERTISEMENT

ಫ್ಲಿಪ್‌ಕಾರ್ಟ್‌: ಎನ್‌ಸಿಎಲ್‌ಟಿ ಆದೇಶಕ್ಕೆ ಹೈಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 21:43 IST
Last Updated 6 ನವೆಂಬರ್ 2019, 21:43 IST
   

ಬೆಂಗಳೂರು: ‘₹ 26.95 ಕೋಟಿ ಸಾಲ ಮರುಪಾವತಿ ಮಾಡಲು ವಿಫಲವಾಗಿದೆ’ ಎಂಬ ಆಕ್ಷೇಪಕ್ಕೆ ಸಂಬಂಧಿಸಿದಂತೆ ಫ್ಲಿಪ್‌ ಕಾರ್ಟ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ವಿರುದ್ಧ ಸಾಲ ವಸೂಲಾತಿ ಪ್ರಕ್ರಿಯೆ ಆರಂಭಿಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ನೀಡಿದ್ದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಈ ಕುರಿತಂತೆ ದೇವರಬೀಸನಹಳ್ಳಿಯಲ್ಲಿರುವ ಫ್ಲಿಪ್‌ ಕಾರ್ಟ್ ಇಂಡಿಯಾ ಕಂಪನಿ ಕಚೇರಿ ವತಿಯಿಂದ ಸಲ್ಲಿಸಲಾಗಿರುವ ರಿಟ್‌ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿ ಮುಂಬೈನ ಮೆಸರ್ಸ್ ಕ್ಲೌಡ್‌ ವಾಕರ್ ಸ್ಟ್ರೀಮಿಂಗ್‌ ಟೆಕ್ನಾಲಜೀಸ್‌ ಪ್ರೈವೇಟ್ ಲಿಮಿಟೆಡ್‌ ಕಂಪನಿ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಪ್ರಕರಣವೇನು?: ‘ಖರೀದಿಸಲು ಆರ್ಡರ್ ಮಾಡಿದ್ದ ಎಲ್‌ಇಡಿ ಟಿ.ವಿ ಸೆಟ್‌ಗಳನ್ನು ಫ್ಲಿಪ್‌ ಕಾರ್ಟ್ ನಿಗದಿತ ಸಮಯದಲ್ಲಿ ತೆಗೆದುಕೊಂಡು ಹೋಗಿಲ್ಲ. ಈ ಒಪ್ಪಂದದ ಅವಧಿಯಲ್ಲಿ ಮಾರುಕಟ್ಟೆ ದರ ಕುಸಿತದಿಂದ ನಮಗೆ ₹ 26.95 ಕೋಟಿ ನಷ್ಟವಾಗಿದೆ. ಇದನ್ನು ಭರಿಸುವಂತೆ ನೀಡಿದ ಡಿಮ್ಯಾಂಡ್ ನೋಟಿಸ್‌ಗಳಿಗೂ ಫ್ಲಿಪ್ ಕಾರ್ಟ್ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ’ ಎಂದು ಕ್ಲೌಡ್ ವಾಕರ್ ಆಕ್ಷೇಪಿಸಿತ್ತು.

ADVERTISEMENT

ಈ ಕುರಿತಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಎನ್‌ಸಿಎಲ್‌ಟಿ ಬೆಂಗಳೂರಿನ ನ್ಯಾಯಪೀಠದ ನ್ಯಾಯಾಂಗ ಸದಸ್ಯ ವಿ. ರಾಜೇಶ್ವರ ರಾವ್ ಫ್ಲಿಪ್‌ ಕಾರ್ಟ್ ಕಂಪನಿ ವಿರುದ್ಧ ಸಾಲ ವಸೂಲಾತಿ ಪ್ರಕ್ರಿಯೆ (ಸಿಐಆರ್‌ಪಿ) ಜರುಗಿಸಲು ಆದೇಶಿಸಿದ್ದರು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.