ADVERTISEMENT

ಕೊಳವೆಬಾವಿ ಗುತ್ತಿಗೆ ಕಾರ್ಯಾದೇಶಕ್ಕೆ ಮಧ್ಯಂತರ ತಡೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 19:40 IST
Last Updated 1 ಮಾರ್ಚ್ 2019, 19:40 IST

ಬೆಂಗಳೂರು: ರಾಜ್ಯದಾದ್ಯಂತ ಗಂಗಾಕಲ್ಯಾಣ ಯೋಜನೆಯಡಿ ಆರು ಸಾವಿರ ಕೊಳವೆ ಬಾವಿ ಕೊರೆಯಿಸಲು ಕರೆದಿದ್ದ ಗುತ್ತಿಗೆಗೆ ಸಂಬಂಧಿಸಿದಂತೆ ಕಾಮಗಾರಿ ಆರಂಭಿಸುವ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

‘ಗುತ್ತಿಗೆ ಅಧಿಸೂಚನೆ ರದ್ದುಪಡಿಸಬೇಕು’ ಎಂದು ಕೋರಿ ನಗರದ ‘ಮೆರ್ಸಸ್ ಮಂಜುನಾಥ ಬೋರ್‌ವೆಲ್ಸ್’ ಸೇರಿದಂತೆ ವಿವಿಧ ಜಿಲ್ಲೆಗಳ ಒಟ್ಟು ಎಂಟು ಬೋರ್‌ವೆಲ್ ಕೊರೆಯುವ ಕಂಪನಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

‘ಮುಂದಿನ ಆದೇಶ ನೀಡುವವರೆಗೆ ಗುತ್ತಿಗೆ ಸಂಬಂಧ ಯಾವುದೇ ಕಾರ್ಯಾದೇಶ ನೀಡಬಾರದು’ ಎಂದು ಡಿ.ದೇವರಾಜು ಅರಸು ಹಿಂದುಗಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ನಿರ್ದೇಶಿಸಿರುವ ನ್ಯಾಯಪೀಠ, ವಿಚಾರಣೆಯನ್ನು ಇದೇ 11ಕ್ಕೆ ಮುಂದೂಡಿದೆ.

ADVERTISEMENT

‘ನೋ ವಾಟರ್-ನೋ ಮನಿ’ ಆಧಾರದ ಮೇಲೆ ಗಂಗಾ ಕಲ್ಯಾಣ ಯೋಜನೆಯಡಿ ರಾಜ್ಯದಾದ್ಯಂತ ಸುಮಾರು ಆರು ಸಾವಿರ ಕೊಳವೆ ಬಾರಿ ಕೊರೆಯಿಸಲು 31 ಪ್ಯಾಕೇಜ್‌ಗಳ ಗುತ್ತಿಗೆಗೆ ಅರ್ಜಿ ಆಹ್ವಾನಿಸಿ ಡಿ.ದೇವರಾಜು ಅರಸ್ ಹಿಂದುಗಳಿದ ವರ್ಗಗಳ ಅಭಿವೃದ್ಧಿ ನಿಗಮ 2018ರ ಡಿಸೆಂಬರ್‌ 12ರಂದು ಅಧಿಸೂಚನೆ ಹೊರಡಿಸಿತ್ತು. ನಂತರ 31 ಪ್ಯಾಕೇಜ್‌ ಅನ್ನು 12 ಪ್ಯಾಕೇಜ್‌ಗಳ ಗುತ್ತಿಗೆಗೆ ಇಳಿಕೆ ಮಾಡಿ 2019ರ ಜನವರಿ 4ರಂದು ತಿದ್ದುಪಡಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ಅರ್ಜಿದಾರರ ಪರ ವಕೀಲ ಡಿ.ಆರ್.ರವಿಶಂಕರ್ ವಾದ ಮಂಡಿಸಿದರು. ಎಂ.ಮುನಿರಾಜ ವಕಾಲತ್ತು ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.