ADVERTISEMENT

ಅನುಮತಿರಹಿತ ತ್ಯಾಜ್ಯ ವಿಂಗಡಣೆ: ಹೈಕೋರ್ಟ್ ಕಿಡಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 20:29 IST
Last Updated 12 ಫೆಬ್ರುವರಿ 2020, 20:29 IST
   

ಬೆಂಗಳೂರು: ‘ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅನುಮತಿ ಇಲ್ಲದೆ ಮಹಾಲಕ್ಷ್ಮೀಪುರಂನಲ್ಲಿ ತಾಜ್ಯ ವಿಂಗಡಣೆ ಘಟಕ ಆರಂಭಿಸಲಾಗಿದೆ’ ಎಂಬ ಆಕ್ಷೇಪಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ ಹೈಕೋರ್ಟ್ ಕಿಡಿ ಕಾರಿದೆ.

‘ವಸತಿ ಪ್ರದೇಶದಲ್ಲಿ ಆರಂಭಿಸಿರುವ ಘನತ್ಯಾಜ್ಯ ವಿಂಗಡಣಾ ಘಟಕ ಮುಚ್ಚುವಂತೆ ಬಿಬಿಎಂಪಿಗೆ ನಿರ್ದೇಶಿಸಬೇಕು’ ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೆಎಸ್‌ಪಿಸಿಬಿ ಪರ ವಕೀಲರು, ‘ಘಟಕ ಆರಂಭಿಸಲು ಬಿಬಿಎಂಪಿ ನಮ್ಮಿಂದ ಯಾವುದೇ ಪರವಾನಗಿ ಪಡೆದಿಲ್ಲ’ ಎಂದು ತಿಳಿಸಿದರು.

ADVERTISEMENT

ಇದಕ್ಕೆ ಅಸಮಾಧಾನ
ವ್ಯಕ್ತಪಡಿಸಿದ ನ್ಯಾಯಪೀಠ, ‘ಅನುಮತಿ ಇಲ್ಲದೆ ಘಟಕ ಆರಂಭಿಸಿರುವುದರಿಂದ ಕೂಡಲೇ ಅದನ್ನು ಮುಚ್ಚಬೇಕು. ಇಲ್ಲದಿದ್ದರೆ ಮುಚ್ಚುವಂತೆ ಆದೇಶಿಸಬೇಕಾಗುತ್ತದೆ. ಈ ಕುರಿತು ಸೂಕ್ತ ವಿವರಣೆ ನೀಡಿ’ ಎಂದು ಪಾಲಿಕೆಗೆ ಸೂಚಿಸಿ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.