ADVERTISEMENT

ಜಮೀನು ಹಂಚಿಕೆ ಆದೇಶಕ್ಕೆ ತಡೆ ನೀಡಿದ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 29 ಜೂನ್ 2018, 20:05 IST
Last Updated 29 ಜೂನ್ 2018, 20:05 IST

ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕು ವರ್ತೂರಿನ ಪಣತ್ತೂರು ಗ್ರಾಮದ ಸರ್ಕಾರಿ ಗುಂಡು ತೋಪು ಜಾಗದಲ್ಲಿ 1.30 ಎಕರೆ ಜಮೀನನ್ನು ಖಾಸಗಿ ವ್ಯಕ್ತಿಗೆ ಹಂಚಿಕೆ ಮಾಡಿರುವ ವಿಶೇಷ ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.

ವಿಶೇಷ ಜಿಲ್ಲಾಧಿಕಾರಿ ಎನ್.ಎಂ. ಪನಾಲಿ ಆದೇಶ ಪ್ರಶ್ನಿಸಿ ಕಂದಾಯ ಇಲಾಖೆ ಪ್ರಧಾನ ಕಾರ‍್ಯದರ್ಶಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ ಮಧ್ಯಂತರ ತಡೆ ನೀಡಿದೆ.

ಪ್ರತಿವಾದಿಗಳಾದ ಬೆಂಗಳೂರು ಜಿಲ್ಲೆ ವಿಶೇಷ ಜಿಲ್ಲಾಧಿಕಾರಿ ಮತ್ತು ಜಮೀನು ಪಡೆದಿರುವ ಪಿ.ಎನ್.ರಾಜಣ್ಣ ಅವರಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ADVERTISEMENT

ವಿಚಾರಣೆ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಜಿ.ಶಿವಣ್ಣ ವಾದ ಮಂಡಿಸಿ, ‘ಸರ್ಕಾರಿ ಗುಂಡುತೋಪನ್ನು ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ ಮಾಡಲು ಅವಕಾಶವಿಲ್ಲ. ವಿಶೇಷ ಜಿಲ್ಲಾಧಿಕಾರಿ ಕ್ರಮ ಕಾನೂನು ಬಾಹಿರವಾಗಿದೆ. ನಿಯಮ ಉಲ್ಲಂಘಿಸಿ ಹೊರಡಿಸಲಾಗಿರುವ ಆದೇಶವನ್ನು ರದ್ದುಪಡಿಸಬೇಕು’ ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಭೂಮಿ ಹಂಚಿಕೆ ಸಂಬಂಧ 2016 ಜುಲೈ 18ರಂದು ವಿಶೇಷ ಜಿಲ್ಲಾಧಿಕಾರಿ ನೀಡಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.