ADVERTISEMENT

ಶಾರದಾ ಡೈಮಂಡ್‌ ವಿರುದ್ಧದ ಪ್ರಕರಣ ರದ್ದು: ದಂಡ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 23:42 IST
Last Updated 2 ಜನವರಿ 2020, 23:42 IST

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ನಕಲಿ ಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪದಡಿ ಸಾಫ್ಟ್‌ವೇರ್ ಎಂಜಿನಿಯರ್ ಶಾರದಾ ಡೈಮಂಡ್ ವಿರುದ್ಧ ಶ್ರೀರಾಂಪುರ ಠಾಣೆ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.

ಪ್ರಕರಣ ರದ್ದುಪಡಿಸುವಂತೆ ಕೋರಿ ಶಾರದಾ ಡೈಮಂಡ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

‘ಗಂಭೀರ ಸ್ವರೂಪವಲ್ಲದ ಅಪರಾಧಕ್ಕೆ ಸಂಬಂಧಿಸಿದ (ಅಸಂಜ್ಞೇಯ ಅಪರಾಧ) ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣ ದಾಖಲಿಸುವ ಮುನ್ನ ನಿಯಮಗಳ ಪ್ರಕಾರ ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ಪಡೆದಿಲ್ಲ ಎಂಬ ತಾಂತ್ರಿಕ ಕಾರಣಗಳಿಗಾಗಿ ನ್ಯಾಯಪೀಠ ಎಫ್‌ಐಆರ್‌ ರದ್ದುಪಡಿಸಿದೆ.

ADVERTISEMENT

ಎಫ್‌ಐಆರ್ ದಾಖಲಿಸುವ ಮುನ್ನ ಕಾನೂನು ಪಾಲನೆಯಲ್ಲಿ ಲೋಪ ಎಸಗಿದ ಆರೋಪದಡಿ ಶ್ರೀರಾಂಪುರ ಠಾಣೆಯ ಇನ್‌ಸ್ಪೆಕ್ಟರ್ ಹಾಗೂ ಸಹಾಯಕ ಸಬ್ ಇನ್‌ಸ್ಪೆಕ್ಟರ್‌ಗೆ ತಲಾ ₹ ಹತ್ತು ಸಾವಿರ ದಂಡ ವಿಧಿಸಲಾಗಿದೆ. ‘ದಂಡದ ಮೊತ್ತವನ್ನು ಪಾವತಿಸಿ, ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಅನುಪಾಲನಾ ವರದಿ ಸಲ್ಲಿಸಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ. ಅರ್ಜಿದಾರರ ಪರ ವಕೀಲ ಎಂ.ಅರುಣ್ ಶ್ಯಾಮ್ ವಾದ ಮಂಡಿಸಿದ್ದರು.

ಪ್ರಕರಣವೇನು?: ‘ವಿಜಯಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬಿಎಲ್‌ಡಿಇ ಸಂಸ್ಥೆಯ ಲೆಟರ್ ಹೆಡ್‌ನಲ್ಲಿ ಬರೆದಿದ್ದರು ಎನ್ನಲಾದ ಪತ್ರವನ್ನು ಶಾರದಾ ಡೈಮಂಡ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಆದರೆ, ಇದು ಬಿಎಲ್‌ಡಿಇ ಶಿಕ್ಷಣ ಸಂಸ್ಥೆಯ ನಕಲಿ ಲೆಟರ್ ಹೆಡ್ ಮತ್ತು ಸಚಿವರ ಸಹಿ ನಕಲು ಮಾಡಿದ ಪತ್ರವಾಗಿದೆ. ಎಂ.ಬಿ. ಪಾಟೀಲರ ತೇಜೋವಧೆ ಮಾಡುವ ಉದ್ದೇಶದಿಂದ ಹೊಂದಿದೆ’ ಎಂದು ಆರೋಪಿಸಿ ಜೆ.ಶರವಣ, 2019ರ ಏಪ್ರಿಲ್‌ 25ರಂದು ಶ್ರೀರಾಂಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.