ADVERTISEMENT

ಪೇಶ್ವೆ ವಿರುದ್ಧ ಪ್ರಕರಣ ರದ್ದು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 21:20 IST
Last Updated 8 ಮಾರ್ಚ್ 2020, 21:20 IST

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಆರೋಪದಲ್ಲಿ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಲಕ್ಷ್ಮಣ ರಾವ್‌ ಪೇಶ್ವೆ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದಲ್ಲಿ ಪೇಶ್ವೆ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು 2012ರಲ್ಲಿ ದಾಳಿ ನಡೆಸಿದ್ದರು. ಬಳಿಕ ಆರೋಪಪಟ್ಟಿ ಸಿದ್ಧಪಡಿಸಿದ್ದರು. ಇದನ್ನು ಪ್ರಶ್ನಿಸಿ ಪೇಶ್ವೆ ಅವರು ಕೋರ್ಟ್‌ ಮೆಟ್ಟಿಲೇರಿದ್ದರು.

‘ಪೇಶ್ವೆ ಪತ್ನಿ ಹೊಂದಿದ್ದ ಆಸ್ತಿಯನ್ನು ಪರಿಗಣಿಸಿ ಪೊಲೀಸರು ಆರೋಪ ಹೊರಿಸಿದ್ದರು. ಇದು ಸರಿಯಲ್ಲ’ ಎಂದು ಕೋರ್ಟ್‌ ತಿಳಿಸಿದೆ.

ADVERTISEMENT

‘ಲೋಕಾಯಕ್ತರು ಈ ಪ್ರಕರಣದ ಸೂಕ್ತ ತನಿಖೆ ನಡೆಸಿಲ್ಲ ಮತ್ತು ವಾಸ್ತವಾಂಶವನ್ನು ಕಲೆಹಾಕಿಲ್ಲ. ಜೊತೆಗೆ, ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲು 1988ರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 19ರ ಅಡಿಯಲ್ಲಿ ಸಚಿವ ಸಂಪುಟದ ಪೂರ್ವಾನುಮತಿ ಕಡ್ಡಾಯ. ಆದರೆ, ಈ ಅನುಮತಿ ಪಡೆದಿಲ್ಲ. ಲೋಕೋಪಯೋಗಿ ಇಲಾಖೆ ಸಚಿವರ ಅನುಮತಿಯನ್ನಷ್ಟೇ ಪಡೆಯಲಾಗಿದೆ. ಇದು ಕಾನೂನುಬದ್ಧವಾಗಿಲ್ಲ. ಪೂರ್ವಾನುಮತಿ ನೀಡುವಲ್ಲಿ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತೋರಿದೆ’ ಎಂದು ಪೇಶ್ವೆ ಪರ ವಕೀಲರು ವಾದ ಮಂಡಿಸಿದ್ದರು. ಇದನ್ನು ಕೋರ್ಟ್‌ ಮಾನ್ಯ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.