ADVERTISEMENT

ಮುಂಬೈ ಸ್ಫೋಟದ ಭವಿಷ್ಯ ಹೇಳಿದ್ದೆ ಎಂಬ ಪಿಐಎಲ್: ₹5 ಸಾವಿರ ದಂಡ ವಿಧಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 11:05 IST
Last Updated 23 ಆಗಸ್ಟ್ 2018, 11:05 IST
   

ಬೆಂಗಳೂರು: ‘ಆವತ್ತೇ ನನ್ನ ಮಾತು ಕೇಳಿದ್ದರೆ ಮುಂಬೈನಲ್ಲಿ ಬಾಂಬ್ ಸ್ಫೋಟ ಸಂಭವಿಸುತ್ತಿರಲಿಲ್ಲ. ಸಾವು ನೋವು ಜರಗುತ್ತಿರಲಿಲ್ಲ. ಹಾಗಾಗಿ ಮಹಾರಾಷ್ಟ್ರ ಗೃಹ ಇಲಾಖೆ ಮತ್ತು ರಾಜಭವನದ ಅಧಿಕಾರಿಗಳ ವಿರುದ್ದ ತನಿಖೆಗೆ ನಿರ್ದೇಶಿಸಬೇಕು’ ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದ ಅರ್ಜಿದಾರರಿಗೆ ಹೈಕೋರ್ಟ್ ₹5 ಸಾವಿರ ದಂಡ ವಿಧಿಸಿದೆ.

‘ದಂಡದ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪಾವತಿಸಬೇಕು. ಈ ಹಣವನ್ನು ಕೊಡಗು ಪ್ರವಾಹ ಸಂತ್ರಸ್ಥರ ನಿಧಿಗೆ ಬಳಕೆ ಮಾಡಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್‌ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠ ಆದೇಶಿಸಿದೆ.

ಟಿ.ಡಿ.ಆರ್ ಹರಿಶ್ಚಂದ್ರ ಗೌಡ ಈ ಪಿಐಎಲ್ ಸಲ್ಲಿಸಿದ್ದರು‌. ಗುರುವಾರ ಈ ಅರ್ಜಿಯ ವಿಚಾರಣೆ ನಡೆಯಿತು.

ADVERTISEMENT

ಕನ್ನಡದಲ್ಲೇ ಖುದ್ದು ವಾದ ಮಂಡಿಸಿದ ಹರಿಶ್ಚಂದ್ರ ಗೌಡ, ಮಹಾರಾಷ್ಟ್ರ ಗೃಹ ಇಲಾಖೆಗೆ ಮತ್ತು ರಾಜಭವನಕ್ಕೆ ಬರೆದ ಮುಂಜಾಗೃತ ಪತ್ರವನ್ನು ನ್ಯಾಯಪೀಠಕ್ಕೆ ನೀಡಿದರು.

‘ನನ್ನ ಮಾತನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿಲಿಲ್ಲ. ಇಲಾಖೆಯ ನಿರ್ಲಕ್ಷ್ಯದಿಂದ ಸಾವು ನೋವುಗಳು ಸಂಭವಿಸಿದವು. ಹೀಗಾಗಿ ಗೃಹ ಇಲಾಖೆ ಅಧಿಕಾರಿಗಳ ವಿರುದ್ಧ ತನಿಖೆಗೆ ನಿರ್ದೇಶಿಸಬೇಕು’ ಎಂದು ಮನವಿ ಮಾಡಿದರು.

ಈ ಮನವಿಯನ್ನು ಸಾರಾಸಗಟವಾಗಿ ತಳ್ಳಿ ಹಾಕಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿತು.

‘ಅರ್ಜಿದಾರರು ಮುಂದಿನ ದಿನಗಳಲ್ಲಿ ಅನಗತ್ಯ ಅಥವಾ ನೈಜ ಸಾಮಾಜಿಕ ಕಾಳಜಿ ಇಲ್ಲದ ಪಿಐಎಲ್‌ಗಳನ್ನು ಸಲ್ಲಿಸಬಾರದು’ ಎಂದು ನ್ಯಾಯಪೀಠವು ಅರ್ಜಿದಾರರಿಂದ ಮುಚ್ಚಳಿಕೆ ಬರೆಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.