ADVERTISEMENT

ಜಮ್ನಾಲಾಲ್ ಟ್ರಸ್ಟ್‌ಗೆ ಆಸ್ತಿ ಮರಳಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 6:41 IST
Last Updated 11 ಜುಲೈ 2021, 6:41 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಮಾಗಡಿ ರಸ್ತೆಗೆ ಹೊಂದಿಕೊಂಡಂತೆ ಇರುವ 354 ಎಕರೆ 10 ಗುಂಟೆ ಜಾಗವನ್ನು ಜಮ್ನಾಲಾಲ್ ಬಜಾಜ್ಟ್ರಸ್ಟ್‌ಗೆ ಮರಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

‘ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ನಿಬಂಧನೆಗಳನ್ನು ಮೀರಿ ಹೆಚ್ಚುವರಿ ಭೂಮಿಯನ್ನು ಈ ಟ್ರಸ್ಟ್ ಹೊಂದಿದೆ’ ಎಂದು ಭೂ ನ್ಯಾಯಮಂಡಳಿ (ಬೆಂಗಳೂರು ಉತ್ತರ) ತೀರ್ಪು ನೀಡಿತ್ತು.

ಇದನ್ನು ಪ್ರಶ್ನಿಸಿ ಟ್ರಸ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್‌ಕುಮಾರ್ ಅವರಿದ್ದ ಪೀಠ, ನ್ಯಾಯಮಂಡಳಿಯ ಈ ನಿಲುವಿಗೆ ಅತೃಪ್ತಿ ವ್ಯಕ್ತಪಡಿಸಿದೆ.

ADVERTISEMENT

ನ್ಯಾಯ ಮಂಡಳಿಯ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿ ಮೌಲ್ಯಮಾಪನ ಮಾಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪೀಠ ಸೂಚನೆ ನೀಡಿದೆ. ಅಲ್ಲದೇ, ಕೈಗೊಂಡ ಕ್ರಮಗಳ ಬಗ್ಗೆ ಮೂರು ತಿಂಗಳಲ್ಲಿ ವರದಿ ಮಂಡಿಸುವಂತೆ ನಿರ್ದೇಶನ ನೀಡಿದೆ.

ಭೂ ನ್ಯಾಯ ಮಂಡಳಿಯು ಮೂರು ಆದೇಶಗಳನ್ನು ಅಂಗೀಕರಿಸಿದ್ದು, 2017ರ ನವೆಂಬರ್ 28ರಂದು ಮೂರನೇ ಆದೇಶ ಹೊರಡಿಸಿತ್ತು. ಈ ಸಂಬಂಧ 2017ರ ಡಿಸೆಂಬರ್‌ನಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿ ಆದೇ ದಿನ ಕಂದಾಯ ಅಧಿಕಾರಿಗಳು ಮೂರು ಮಹಜರುಗಳನ್ನು ನಡೆಸಿ ಭೂಮಿ ವಶಕ್ಕೆ ಪಡೆದಿದ್ದರು.

‘ಟ್ರಸ್ಟ್ ಹೊಂದಿರುವ ಜಮೀನಿಗೆ ಸಂಬಂಧಿಸಿದಂತೆ ಭೂ ಸುಧಾರಣಾ ಕಾಯ್ದೆಯಡಿ ಯಾವುದೇ ಅರ್ಜಿಗಳು ಬಂದಿಲ್ಲ. 400 ಎಕರೆ ಜಮೀನು ಹೊಂದಿರುವ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಟ್ರಸ್ಟ್‌ನಿಂದಲೇ ಘೋಷಣೆ ಸಲ್ಲಿಸಲಾಗಿದೆ. ಅಲ್ಲದೇ, ಈ ಭೂಮಿ ಕೃಷಿಗೆ ಯೋಗ್ಯವಾಗಿಲ್ಲ. ಆದರೂ, ಭೂಮಿಯನ್ನು ಸರ್ಕಾರಕ್ಕೆ ಒಪ್ಪಿಸುವಂತೆ ನ್ಯಾಯ ಮಂಡಳಿ ಆದೇಶಿಸಿದೆ’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

2010ರಲ್ಲಿ ಇದೇ ರೀತಿಯ ಆದೇಶ ಹೊರಡಿಸಿದ್ದನ್ನು ಪ್ರಶ್ನಿಸಿ ಟ್ರಸ್ಟ್ ಹೈಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣವನ್ನು ಪುನರ್ ಪರಿಶೀಲಿಸುವಂತೆ ಹೈಕೋರ್ಟ್ ಈ ಹಿಂದೆಯೂ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.