ADVERTISEMENT

ಹತ್ಯೆಗೆ ಸುಪಾರಿ ಆರೋಪ: ಜಾಮೀನು ನಕಾರ

ಪ್ರತಿಷ್ಠಿತ ರಾಜಕಾರಣಿ ಕುಟುಂಬದ ಸಂಬಂಧಿಯ ಆಸ್ತಿ ಕಬಳಿಕೆ ಸಂಚು

​ಪ್ರಜಾವಾಣಿ ವಾರ್ತೆ
Published 28 ಮೇ 2023, 0:02 IST
Last Updated 28 ಮೇ 2023, 0:02 IST
high court
high court   

ಬೆಂಗಳೂರು: ‘ಬಹುಕೋಟಿ ಮೌಲ್ಯದ ಆಸ್ತಿ ಕಬಳಿಸಲು ಸಂಚು ರೂಪಿಸಿ, ಸುಪಾರಿ ಕೊಟ್ಟು ಮಲಮಗನ (ತನ್ನ ಅನಧಿಕೃತ ಪತಿಯ ಮೊದಲ ಹೆಂಡತಿ ಮಗ) ಹತ್ಯೆಗೆ ಕಾರಣವಾಗಿದ್ದಾರೆ‘ ಎಂಬ ಆರೋಪದಡಿ ಎರಡು ವರ್ಷಗಳಿಂದ ಜೈಲಿನಲ್ಲಿರುವ ಮಲತಾಯಿಯೊಬ್ಬರಿಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್‌ ನಿರಾಕರಿಸಿದೆ.

ಈ ಸಂಬಂಧ ಚೆನ್ನೈನ ಒಎಂಆರ್‌ ರಸ್ತೆಯ ಹೀರಾ ನಂದಿನಿ ಟವರ್ಸ್‌ನ ಅಪಾರ್ಟ್‌ಮೆಂಟ್‌ನಲ್ಲಿ ತಾತ್ಕಾಲಿಕ ನಿವಾಸಿಯಾಗಿರುವ ಮತ್ತು ಶಿಮ್ಲಾದಲ್ಲಿ ಉದ್ಯಮ ವಹಿವಾಟು ಹೊಂದಿರುವ 36 ವರ್ಷದ ಇಂದು ಚೌಹಾಣ್‌ ಅಲಿಯಾಸ್‌ ಇಂದು ಎಂಬ ಮಹಿಳೆ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮದ್‌ ನವಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲರು, ’ಈ ಪ್ರಕರಣದಲ್ಲಿ ಅರ್ಜಿದಾರಳನ್ನು ತಪ್ಪಾಗಿ ಸಿಲುಕಿಸಲಾಗಿದೆ. ಆಕೆ ಮುಗ್ಧೆ. ಕೇವಲ ಆರೋಪಿಗಳ ಹೇಳಿಕೆಯನ್ನು ಆಧರಿಸಿ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ದೋಷಾರೋಪ ಹೊರಿಸಲು ಯಾವುದೇ ಸಾಕ್ಷ್ಯಗಳಿಲ್ಲ. ಕೊಲೆಗೆ ಸುಪಾರಿ ನೀಡಿದ್ದಾರೆ ಎಂಬುದೆಲ್ಲಾ ಆಧಾರರಹಿತ‘ ಎಂದು ವಾದ ಮಂಡಿಸಿದ್ದರು. 

ADVERTISEMENT

ಆದರೆ, ಪ್ರಾಸಿಕ್ಯೂಷನ್‌ ಪರ ಪ್ರಬಲ ವಾದ ಮಂಡಿಸಿದ್ದ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್‌ ವಿ.ಜಿ. ಭಾನುಪ್ರಕಾಶ್‌, ‘ಅರ್ಜಿದಾರಳ ವಿರುದ್ಧದ ಆರೋಪಗಳು ಮೇಲ್ನೋಟಕ್ಕೇ  ಕ್ರೂರವಾಗಿ ಕಂಡು ಬರುತ್ತಿವೆ. ಆಕೆ ಬೆಂಗಳೂರಿನ ಕಾಯಂ ನಿವಾಸಿಯಲ್ಲ. ಅಂತೆಯೇ ಆಕೆಗೆ ಕಾಯಂ ನಿವಾಸಸ್ಥಾನವಿಲ್ಲ. ಜೈಲಿನಿಂದ ಹೊರಬಂದರೆ ಸಾಕ್ಷ್ಯನಾಶ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದರಿಂದ ತನಿಖೆಗೆ ಅಪಾಯಗಳಿವೆ‘ ಎಂದು ಪ್ರತಿಪಾದಿಸಿದ್ದರು.

’ಅರ್ಜಿದಾರಳ ವಿರುದ್ಧದ ಆರೋಪಗಳಿಗೆ ಜೀವಾವಧಿ ಅಥವಾ ಮರಣ ದಂಡನೆ ವಿಧಿಸಬಹುದಾಗಿದೆ. ಆರೋಪಿಯು, ಮಹಿಳೆ ಎಂಬ ಏಕೈಕ ಕಾರಣಕ್ಕಾಗಿ ಜಾಮೀನು ನೀಡಲು ಸಾಧ್ಯವಿಲ್ಲ. ಆಕೆ ಸುಪಾರಿಗೆ ಹಣ ನೀಡಿದ್ದಕ್ಕೆ ಸಾಕ್ಷ್ಯಗಳಿವೆ. ಕೊಲೆಗೆ ಸಂಚು ರೂಪಿಸಿ ಅದನ್ನು ಜಾರಿಗೊಳಿಸಲು ಪ್ರಯತ್ನಪಟ್ಟಿದ್ದಾರೆ. ಹಾಗಾಗಿ ಜಾಮೀನು ನೀಡಬಾರದು‘ ಎಂದು ಮನವಿ ಮಾಡಿದ್ದರು. ಅಂತಿಮವಾಗಿ ಪ್ರಾಸಿಕ್ಯೂಷನ್‌ ವಾದವನ್ನು ಮನ್ನಿಸಿರುವ ನ್ಯಾಯಪೀಠ ಜಾಮೀನು ನಿರಾಕರಿಸಿ ಆದೇಶಿಸಿದೆ.

ದೋಷಾರೋಪ ಪಟ್ಟಿಯಲ್ಲೇನಿದೆ?: ‘ಸಿದ್ಧಾರ್ಥ ಸಿಂಗ್ 28 ವರ್ಷದ ಯುವ ಉದ್ಯಮಿ. ದಾಸರಹಳ್ಳಿಯ ಭುವನೇಶ್ವರಿ ಬಡಾವಣೆಯಲ್ಲಿನ ‘ಸ್ಟೇ ಅಡೋಬ್‌ ಕೋಲಮನ್‌ ಅಪಾರ್ಟ್‌ಮೆಂಟ್‌’ನಲ್ಲಿ ವಾಸವಿದ್ದರು. ಇವರು ರಜಪೂತ ಸಮುದಾಯಕ್ಕೆ ಸೇರಿದ ಸಿ.ಆರ್.ದೇವೇಂದರ್ ಸಿಂಗ್‌ (ರಾಜ್ಯದ ಪ್ರತಿಷ್ಠಿತ ರಾಜಕಾರಣಿಯೊಬ್ಬರ ನಿಕಟ ಸಂಬಂಧಿ) ಎಂಬುವರ ಮೊದಲ ಹೆಂಡತಿಯ ಪುತ್ರ. 

ಆರೋಪಿ ಇಂದು ಚೌಹಾಣ್‌ ತಾನು ದೇವೇಂದರ್‌ ಸಿಂಗ್ ಅವರಿಗೆ ಎರಡನೇ ಹೆಂಡತಿ ಎಂದೇ ಹೇಳಿಕೊಂಡಿದ್ದಾರೆ. ದೇವೇಂದರ್ ಸಿಂಗ್ ಅವರ ವೃದ್ಧ ಸಹೋದರಿಗೆ ಮಕ್ಕಳಿಲ್ಲದ ಕಾರಣ ಅವರಿಗೆ ಸೇರಿದ ಬೆಂಗಳೂರಿನಲ್ಲಿರುವ ಬಹುಕೋಟಿ ಮೌಲ್ಯದ ಆಸ್ತಿಯನ್ನು ದೇವೇಂದರ್ ಸಿಂಗ್‌ ಅವರೇ ನೋಡಿಕೊಳ್ಳುತ್ತಿದ್ದರು. ಇವರ ಕೌಟುಂಬಿಕ  ವ್ಯವಹಾರಗಳಲ್ಲಿ ಸಿದ್ಧಾರ್ಥ ಕೂಡಾ ಭಾಗಿಯಾಗತ್ತಿದ್ದರು. 

ಇದರಿಂದ ಕುಪಿತಗೊಂಡಿದ್ದ ಇಂದು ಚೌಹಾಣ್‌, ದೇವೇಂದರ್‌ ಸಿಂಗ್ ನೋಡಿಕೊಳ್ಳುತ್ತಿರುವ ಸಹೋದರಿಯ ಆಸ್ತಿಯು ಭವಿಷ್ಯದಲ್ಲಿ ಸಿದ್ಧಾರ್ಥನಿಗೇ ದಕ್ಕುತ್ತದೆ ಎಂಬ ಕಾರಣಕ್ಕಾಗಿ ಸಿದ್ಧಾರ್ಥನನ್ನು ಮುಗಿಸಲು ಸಂಚು ರೂಪಿಸಿದ್ದರು. ಇದಕ್ಕಾಗಿ ಅವರು ಹಂತಕರಿಗೆ ₹ 4 ಲಕ್ಷ ಸುಪಾರಿ ಕೊಟ್ಟಿದ್ದರು. ಸುಪಾರಿ ಪಡೆದ ಮೂವರು ಹಂತಕರು ಸಿದ್ಧಾರ್ಥ ಅವರನ್ನು 2021ರ ಜನವರಿ 25ರಂದು ಅಪಾರ್ಟ್‌ಮೆಂಟ್‌ನಿಂದ ಅಪಹರಿಸಿದ್ದರು. ಕಾರಿನಲ್ಲಿ ಕೋಲಾರದ ಕಡೆ ಕರೆದೊಯ್ದು ಕಾರಿನ ಸೀಟ್‌ ಬೆಲ್ಟ್‌ನಿಂದ ಕುತ್ತಿಗೆಗೆ ಬಿಗಿದು ಸಾಯಿಸಿ ನಂತರ ನೆಲ್ಲೂರು ಬಳಿಯ ಕಾಡಿನಲ್ಲಿ ಹೆಣವನ್ನು ಸುಟ್ಟು ಹಾಕಿದ್ದರು. 

ಹತ್ಯೆ ನಂತರ ಮೊದಲ ಆರೋಪಿ 2021ರ ಜನವರಿ 29ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎರಡು ಮತ್ತು ಮೂರನೇ ಆರೋಪಿಯನ್ನು ಬಂಧಿಸಲಾಗಿದೆ. ಇವರಿಬ್ಬರ ಹೇಳಿಕೆಯ ಆಧಾರದಲ್ಲಿ ಇಂದು ಚೌಹಾಣ್‌ ಅವರ ಸಂಚು ಬಯಲಾಗಿದ್ದು ಅವರನ್ನೂ ಬಂಧಿಸಲಾಗಿದೆ. ಸಿದ್ಧಾರ್ಥ ಬದುಕಿದ್ದಾನೆ ಎಂದು ಬಿಂಬಿಸುವಂತೆ ಆತನ ಮೊಬೈಲ್‌ನಿಂದ ಇಂದು ಚೌಹಾಣ್‌ ಹತ್ತಿರದವರಿಗೆ ಫೋನ್‌ ಮಾಡಿರುವುದು, ಅಪರಿಚಿತರು ಅಪಾರ್ಟ್‌ಮೆಂಟ್‌ ಪ್ರವೇಶಿಸಿರುವ ಸಿಸಿಟಿವಿ ದೃಶ್ಯಾವಳಿಗಳು, ಅಂತೆಯೇ ಸಿದ್ಧಾರ್ಥನ ಲಗೇಜ್‌ ಅನ್ನು  ಅಪಾರ್ಟ್‌ಮೆಂಟ್‌ನಿಂದ ಹೊತ್ತೊಯ್ದಿರುವ ಸಾಕ್ಷ್ಯಾಧಾರಗಳು ತನಿಖೆ ವೇಳೆ ಲಭ್ಯವಾಗಿವೆ.

ಅಪಹರಣಕ್ಕೆ ಒಳಗಾಗಿರುವ ನನ್ನ ಮಗನನ್ನು ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೇವೇಂದರ್‌ ಸಿಂಗ್‌ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಅನ್ವಯ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಭಾರತೀಯ ದಂಡ ಸಂಹಿತೆ–1860ರ ಕಲಂ 302, 201 ಮತ್ತು 120 ಬಿ ಅನುಸಾರ ಸಿಟಿ ಸಿವಿಲ್‌ ಕೋರ್ಟ್‌ನ 62ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ‘ ಎಂದು ಪ್ರಾಸಿಕ್ಯೂಷನ್‌ ದೋಷಾರೋಪ ಪಟ್ಟಿಯಲ್ಲಿ ವಿವರಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.