ಹೈಕೋರ್ಟ್
ಬೆಂಗಳೂರು: ಸಂರಕ್ಷಿತ ಸ್ಮಾರಕ ವ್ಯಾಪ್ತಿಗೆ ಒಳಪಡುವ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯಲ್ಲಿರುವ ಪ್ರಾಚೀನ ಚೌಟರ ಅರಮನೆ ಸಮೀಪ ಇರುವ ಹಳೆ ಮಾರುಕಟ್ಟೆ ಕಟ್ಟಡ ನೆಲಸಮಗೊಳಿಸಿ ಬಹುಮಹಡಿಯುಳ್ಳ ಹೊಸ ಮಾರುಕಟ್ಟೆ ಕಟ್ಟಡ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಇದೇ 24ರಂದು ಆದೇಶ ಹೊರಡಿಸುವುದಾಗಿ ಹೈಕೋರ್ಟ್ ಹೇಳಿದೆ.
ಸಂರಕ್ಷಿತ ಸ್ಮಾರಕ ಪ್ರದೇಶದ ವ್ಯಾಪ್ತಿಯಲ್ಲಿ ಹೊಸ ಮಾರುಕಟ್ಟೆ ಕಟ್ಟಡ ನಿರ್ಮಾಣ ಮಾಡುತ್ತಿರುವ ಮೂಡಬಿದಿರೆ ಪುರಸಭೆಯ ಕ್ರಮವನ್ನು ಪ್ರಶ್ನಿಸಿ ಜೇಸನ್ ಮಾರ್ಷಲ್ ನವಾರೇಸ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಮಾರುಕಟ್ಟೆ ಕಟ್ಟಡ ನಿರ್ಮಾಣ ಅನುಮತಿಯನ್ನು ತಿರಸ್ಕರಿಸಿದ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ (ಎನ್‌ಎಂಎ) ಕ್ರಮವನ್ನು ಪ್ರಶ್ನಿಸಿ ಮೂಡಬಿದಿರೆ ಪುರಸಭೆ ಸಲ್ಲಿಸಿರುವ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಈ ವಿವಾದದ ಬಗ್ಗೆ ನ್ಯಾಯಾಲಯ ಇದೇ 24ರಂದು ಕೆಲ ಆದೇಶಗಳನ್ನು ಹೊರಡಿಸಲಿದೆ. ಈ ವೇಳೆ ಗುತ್ತಿಗೆದಾರರ ನಡೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಲಿದೆ. ಅಲ್ಲದೇ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯವೂ (ಎಎಸ್‌ಐ) ತನ್ನ ಅಭಿಪ್ರಾಯ ತಿಳಿಸಲಿ’ ಎಂದು ವಿಚಾರಣೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.