ADVERTISEMENT

ಎಸ್‌.ಮೂರ್ತಿ ಅರ್ಜಿ ವಜಾ; ವಿಚಾರಣೆ ರದ್ದುಗೊಳಿಸಬೇಕೆಂಬ ಮನವಿ ತಿರಸ್ಕಾರ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 22:14 IST
Last Updated 9 ನವೆಂಬರ್ 2020, 22:14 IST

ಬೆಂಗಳೂರು: ಭ್ರಷ್ಟಾಚಾರ, ಕಾನೂನು ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ವಿಧಾನಸಭೆಯ ವಿಶೇಷ ಮಂಡಳಿ ಆರಂಭಿಸಿರುವ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ವಿಧಾನಸಭೆಯ ಕಾರ್ಯದರ್ಶಿ ಹುದ್ದೆಯಿಂದ ಅಮಾನತುಗೊಂಡಿರುವ ಎಸ್‌. ಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ವಿಶೇಷ ಮಂಡಳಿಯ ಅನುಮೋದನೆ ಪಡೆಯದೆ ದೋಷಾರೋಪ ಪಟ್ಟಿ ಅಂತಿಮಗೊಳಿಸಲಾಗಿದೆ ಎಂದು ಆರೋಪಿಸಿದ್ದ ಮೂರ್ತಿ, ಅದೇ ಆಧಾರದಲ್ಲಿ ವಿಚಾರಣೆಯನ್ನೇ ರದ್ದು ಮಾಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮೂರ್ತಿ ಅವರ ಅರ್ಜಿಯನ್ನು ತಿರಸ್ಕರಿಸಿ ಅಕ್ಟೋಬರ್‌ 4ರಂದು ಆದೇಶ ಹೊರಡಿಸಿರುವ ನ್ಯಾಯಮೂರ್ತಿ ಎನ್‌.ಎಸ್‌. ಸಂಜಯ್‌ ಗೌಡ ಅವರಿದ್ದ ಏಕಸದಸ್ಯ ಪೀಠ, ವಿಚಾರಣೆ ಪೂರ್ಣಗೊಳಿಸಲು ವಿಶೇಷ ಮಂಡಳಿಗೆ ಆರು ತಿಂಗಳ ಗಡುವು ವಿಧಿಸಿದೆ.

2016 ಮತ್ತು 2017ನೇ ಸಾಲಿನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಅಧಿವೇಶ
ನಗಳ ಸಮಯದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆಸಿರುವ ಆರೋಪ ಮೂರ್ತಿ ಮೇಲಿದೆ. ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳು ಲೆಕ್ಕಪರಿಶೋಧನೆ ನಡೆಸಿ ನೀಡಿದ್ದ ವರದಿ ಆಧಾರದಲ್ಲಿ ಮೂರ್ತಿ ವಿರುದ್ಧ ವಿಶೇಷ ಮಂಡಳಿಯಿಂದ ವಿಚಾರಣೆ ಆರಂಭಿಸಲಾಗಿದೆ. 2018ರ ಡಿಸೆಂಬರ್‌ನಲ್ಲಿ ಅವರನ್ನು ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ಅಮಾನತು ಮಾಡಲಾಗಿತ್ತು.

ADVERTISEMENT

ತಮ್ಮನ್ನು ಅಮಾನತು ಮಾಡಲು ಮಾತ್ರ ವಿಧಾನಸಭೆಯ ವಿಶೇಷ ಮಂಡಳಿ ಅನುಮೋದನೆ ನೀಡಿತ್ತು. ವಿಚಾರಣೆ ಆರಂಭಿಸುವುದಕ್ಕೆ ಸಿದ್ಧಪಡಿಸಿದ್ದ ದೋಷಾರೋಪ ಪಟ್ಟಿಗೆ ಅನುಮೋದನೆಯನ್ನೇ ಪಡೆದಿಲ್ಲ. ನಿಯಮಾನುಸಾರ ಒಪ್ಪಿಗೆ ಪಡೆಯದೇ ಸಲ್ಲಿಸಿದ ದೋಷರೋಪ ಪಟ್ಟಿಯ ಆಧಾರದಲ್ಲಿ ವಿಚಾರಣೆ ನಡೆಸುವುದು ನ್ಯಾಯಯುತವಲ್ಲ. ಈ ಕಾರಣದಿಂದ ತಮ್ಮ ವಿರುದ್ಧದ ವಿಚಾರಣೆ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

‘ಅರ್ಜಿದಾರರನ್ನು ಸೇವೆಯಿಂದ ಅಮಾನತುಗೊಳಿಸುವ ಮುನ್ನವೇ ಸಾಕಷ್ಟು ಪ್ರಕ್ರಿಯೆಗಳು ನಡೆದಿವೆ. ಅಮಾನತು ಮಾಡುವುದಕ್ಕೂ ಮೊದಲೇ ಅವರ ವಿರುದ್ಧದ ಎಲ್ಲ ಆರೋಪಗಳ ಬಗ್ಗೆಯೂ ವಿಶೇಷ ಮಂಡಳಿ ಪರಿಶೀಲನೆ ನೀಡಿದೆ. ಆ ಬಳಿಕವೇ ಅಮಾನತು ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಅದೇ ಆರೋಪಗಳ ಕುರಿತು ವಿಚಾರಣೆ ಆರಂಭವಾಗಿದೆ. ವಿಶೇಷ ಮಂಡಳಿ ಪುನರ್‌ರಚನೆ ಆಗಿದೆ ಎಂಬ ಒಂದೇ ಕಾರಣದಿಂದ ಮತ್ತೆ ಅನುಮೋದನೆ ಪಡೆಯಬೇಕಿತ್ತು ಎಂಬ ಬೇಡಿಕೆಯನ್ನು ಮಾನ್ಯ ಮಾಡಲಾಗದು’ ಎಂದು ನ್ಯಾ. ಸಂಜಯ್‌ ಗೌಡ ತೀರ್ಪಿನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.