ADVERTISEMENT

ಇಂಥ ಪೋಷಕರಿಗೆ ಮಕ್ಕಳೇಕೆ ಬೇಕು: ಕಿತ್ತಾಡುವ ತಂದೆತಾಯಿಗೆ ಹೈಕೋರ್ಟ್‌ ತಪರಾಕಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 9:15 IST
Last Updated 4 ನವೆಂಬರ್ 2019, 9:15 IST
   

ಬೆಂಗಳೂರು: ‘ತಂದೆಯನ್ನು ದ್ವೇಷಿಸುವಂತೆ ಹೇಳಿಕೊಡುವ ತಾಯಿ; ತಾಯಿಯನ್ನು ದ್ವೇಷಿಸುವಂತೆ ಹೇಳಿಕೊಡು‌ವ ತಂದೆ. ಇಂಥವರು ಯಾವ ಪುರುಷಾರ್ಥಕ್ಕೆ ಮಕ್ಕಳನ್ನು ಹೆರಬೇಕು?ಪೋಷಕರಾಗಬೇಕು’ ಎಂದು ಹೈಕೋರ್ಟ್ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿತು.

ವಿಚ್ಛೇದನಕ್ಕೆ ಸಂಬಂಧಿಸಿದ ಅರ್ಜಿಯೊಂದರವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪೋಷಕರ ನಡೆಗೆ ಕೆಂಡಾಮಂಡಲವಾಯಿತು. ವಿಚಾರಣೆ ವೇಳೆ ವೀರಪ್ಪ ಅವರು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡರು.

‘ಮಕ್ಕಳನ್ನು ವಸ್ತುಗಳಂತೆ ಬಳಸಬಾರದು. ನಿಮ್ಮ ತೋರ್ಪಡಿಕೆಗಳಿಗೆ‌ ಮಕ್ಕಳನ್ನು ಯಾಕ್ರೀ ಬಳಸಿಕೊಳ್ಳುತ್ತೀರಾ, ನಿಮ್ಮ ಪ್ರತಿಷ್ಠೆಗಳಿಗೆ ಧಕ್ಕೆಯಾಗಬಾರದು, ನಿಮ್ಮೆಲ್ಲಾ ದುರಹಂಕಾರಗಳಿಗೆ ಕೋರ್ಟ್‌ನಲ್ಲಿ ಜಯ ಸಿಗಬೇಕು ಅಲ್ಲವೇ’ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೋಷಕರು ಜವಾಬ್ದಾರಿ ಅರಿಯಬೇಕು

‘ತಮ್ಮಸ್ವಾರ್ಥಗಳಿಗೆ ಮಕ್ಕಳನ್ನು ಅಸ್ತ್ರವಾಗಿ ಬಳಸಿಕೊಳ್ಳುವವರು ಹೇಡಿಗಳು. ಇವರೆಲ್ಲಾ ತಾಲಿಬಾನ್‌ಗಿಂತಲೂ ವಿಕೃತವಾದ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಪೋಷಕರ ವೈಷಮ್ಯ, ಕಲಹ, ಮನಸ್ತಾಪಗಳನ್ನೇ ನೋಡಿಕೊಂಡು ಬೆಳೆಯುವ ಮಕ್ಕಳು ಭವಿಷ್ಯದಲ್ಲಿ ಸಮಾಜಘಾತುಕರಾಗುತ್ತಾರೆ’ಎಂದು ಆತಂಕ ವ್ಯಕ್ತಪಡಿಸಿದರು.

‘ಮಕ್ಕಳು ದಾರಿ ತಪ್ಪಲು, ಅಪರಾಧ ಎಸಗಲು ಇಂತಹ ಪೋಷಕರೇ ಪ್ರಮುಖ ಕಾರಣ. ನಿಮ್ಮಂತ‌ಹ ಪೋಷಕರಿಂದಲೇಸಮಾಜಕ್ಕೆ ಘಾತುಕ ಮಕ್ಕಳಅರ್ಪಣೆಯಾಗುತ್ತಿದೆ.ನಿಮ್ಮೊಳಗಿನ ಸೇಡು ತೀರಿಸಿಕೊಳ್ಳಲು ನೀವು ನಿಮ್ಮ ಮಕ್ಕಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದೀರಿ. ದಯಮಾಡಿ ಇಂತಹ ಮಕ್ಕಳಲ್ಲಿ ಇಂಥ ಮನಃಸ್ಥಿತಿ ಬೆಳೆಸಬೇಡಿ. ಸಮಾಜಕ್ಕೆ ಹಾನಿ ಮಾಡಬೇಡಿ’ಎಂದು ಅರ್ಜಿದಾರರ ಮೈಚಳಿ ಬಿಡಿಸಿದರು.

ದೇಶದ ಭವಿಷ್ಯಕ್ಕೆ ಕುತ್ತು

‘ಸಾಮಾಜಿಕ ಹೊಣೆಗಾರಿಕೆ ಇಲ್ಲದ‌ ವಕೀಲರು, ವೈದ್ಯರು ಹಾಗೂ ಪೋಷಕರೇ ಎಲ್ಲೆಲ್ಲೂ ತುಂಬಿ ತುಳುಕಾಡುತ್ತಿದ್ದಾರೆ.ಕೌಟುಂಬಿಕ ನ್ಯಾಯಾಲಯವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ದುರ್ಬಳಕೆ ಮಾಡಿಕೊಳ್ಳುವ ಬೇಜವಾಬ್ದಾರಿ ಜನರಿಂದ ದೇಶದ ಭವಿಷ್ಯವೇ ಹಾಳಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಇಂಥ ನೀಚ ಕೆಲಸಗಳಲ್ಲಿ ತೊಡಗಿದ್ದಾರೆ. ಹಣಕ್ಕಾಗಿ ಕೆಲಸ ಮಾಡೋದಲ್ಲ, ಸಮಾಜಕ್ಕೂ ಸಹಾಯ ಆಗುವ ಕೆಲಸ ಮಾಡಬೇಕು.ವಕೀಲರ ಸಂಘ ಹಾಗೂ ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒ) ಇಂತಹ ಸಂಗತಿಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು’ಎಂದು ಎಚ್ಚರಿಸಿದರು.

ಪ್ರಕರಣವೇನು?

ಪತಿ ಅಮೆರಿಕದಲ್ಲಿ ವೈದ್ಯ ವೃತ್ತಿಯಲ್ಲಿದ್ದಾರೆ. ಪತ್ನಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಇಬ್ಬರ ನಡುವಿನ ವಿಚ್ಛೇದನ ಪ್ರಕರಣ ಕೌಟುಂಬಿಕ ನ್ಯಾಯಾಲಯದಲ್ಲಿದೆ.

ಪತಿ ಬೆಂಗಳೂರಿಗೆ ಬಂದಾಗ ಕೇವಲ ಎರಡು ಗಂಟೆಗಳ ಅವಧಿಗೆ ಮಾತ್ರ ಮಗುವಿಗೆ ತಂದೆಯೊಂದಿಗೆ ಕಾಲ ಕಳೆಯಲು ಅವಕಾಶ ನೀಡಲಾಗುತ್ತಿತ್ತು.

‘ಮಕ್ಕಳು ತಂದೆ ಮತ್ತು ತಾಯಿಯೊಂದಿಗೆ ಸಮಾನ ಅವಧಿಯಲ್ಲಿ(50:50) ಸಮಯ ಕಳೆಯಲು ಅವಕಾಶವಿದೆ. ಆದರೆ, ಪತ್ನಿ ನನಗೆ ಈ ಅವಕಾಶ ನೀಡುತ್ತಿಲ್ಲ.ಪತ್ನಿಗೆ ಸೂಕ್ತ ನಿರ್ದೇಶನ ನೀಡಬೇಕು’ಎಂದು ಕೋರಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಮುಂದಿನ ವಿಚಾರಣೆಗೆ ಪೋಷಕರು ಖುದ್ದು ಹಾಜರಿರಬೇಕುನ್ಯಾಯಪೀಠ ನಿರ್ದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.