ADVERTISEMENT

ತುಳಸಿ ಮುನಿರಾಜುಗೌಡ ವಿರುದ್ಧದ ಪ್ರಕರಣ ವಜಾ

ಸಚಿವ ಮುನಿರತ್ನ ಕುಮ್ಮಕ್ಕಿನಿಂದ ದೂರು ದಾಖಲು ಆರೋಪ

​ಪ್ರಜಾವಾಣಿ ವಾರ್ತೆ
Published 21 ಜುಲೈ 2022, 16:38 IST
Last Updated 21 ಜುಲೈ 2022, 16:38 IST
   

ಬೆಂಗಳೂರು: ‘ಚುನಾವಣೆ ಸಮಯದಲ್ಲಿ ಮತದಾರರಿಗೆ ಹಣದ ಆಮಿಷವೊಡ್ಡಲು ಮುಂದಾಗಿದ್ದರು’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ತಿನಬಿಜೆಪಿ ಸದಸ್ಯ ತುಳಸಿ ಮುನಿರಾಜುಗೌಡ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.

‘ನನ್ನ ವಿರುದ್ಧದ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ಮುನಿರಾಜುಗೌಡ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ಮುನಿರಾಜುಗೌಡ ಪರ ವಾದಿಸಿದ ವಕೀಲ ಧರಣೇಶ್ , ‘ದೂರುದಾರರು ಮುನಿರಾಜುಗೌಡರ ವಿರುದ್ಧ ದೂರನ್ನೇ ಕೊಟ್ಟಿರಲಿಲ್ಲ. ಆದರೂ ಯಶವಂತಪುರ ಠಾಣೆ ಪೊಲೀಸರು ಅವರನ್ನು 2ನೇ ಆರೋಪಿಯನ್ನಾಗಿ ಮಾಡಿದ್ದರು ಮತ್ತು ತನಿಖೆಯ ವೇಳೆ ಗೌಡರ ವಿರುದ್ಧ ಯಾವ ಸಾಕ್ಷ್ಯ ಲಭ್ಯವಾಗದಿದ್ದರೂ ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮತದಾರರ ನಕಲಿ ಗುರುತಿನ ಚೀಟಿಗಳನ್ನು ಸಂಗ್ರಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಈಗ ಸಚಿವರಾಗಿರುವ ಮುನಿರತ್ನ ವಿರುದ್ಧ ಮುನಿರಾಜುಗೌಡ ಕಾನೂನು ಸಮರ ನಡೆಸುತ್ತಿರುವುದೇ ಇದಕ್ಕೆ ಕಾರಣ. ಹೀಗಾಗಿ, ದುರುದ್ದೇಶಪೂರಿತವಾಗಿ ಈ ಸುಳ್ಳು ಪ್ರಕರಣ ದಾಖಲಿಸಲಾಗಿದೆ’ ಎಂದು ವಿವರಿಸಿದ್ದರು.

ADVERTISEMENT

‘ಭಾರತೀಯ ದಂಡ ಸಂಹಿತೆ ಕಲಂ 188ರ ಅಡಿಯಲ್ಲಿನ ಅಪರಾಧಕ್ಕೆ ಪೊಲೀಸರು ನೇರವಾಗಿ ದೂರು ದಾಖಲು ಮಾಡಿಕೊಂಡು ಮುಂದುವರೆಯುವಂತಿಲ್ಲ. ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆಯೇ ದೂರು ದಾಖಲಿಸಬೇಕು. ದೂರು ಪರಿಗಣಿಸಿ ಮ್ಯಾಜಿಸ್ಟ್ರೇಟ್ ಆದೇಶಿಸಿದ ನಂತರವೇ ತನಿಖೆ ಮುಂದುವರಿಸಬೇಕು ಎಂಬುದು ದಂಡ ಪ್ರಕ್ರಿಯೆ ಸಂಹಿತೆ ಕಲಂ 195ರ ಕಡ್ಡಾಯ ನಿಯಮ. ಆದರೆ, ಈ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ’ ಎಂದು ವಿವರಿಸಿದ್ದರು.

ಈ ವಾದವನ್ನು ಮಾನ್ಯ ಮಾಡಿದ ನ್ಯಾಯಪೀಠ, ಮುನಿರಾಜುಗೌಡ ವಿರುದ್ಧದ ದೂರು ಮತ್ತು ಈ ಸಂಬಂಧ 24ನೇ ಎಸಿಎಂಎಂ ನ್ಯಾಯಾಲಯದಲ್ಲಿನ ವಿಚಾರಣೆ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣವೇನು?: 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮುನಿರಾಜುಗೌಡ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು.

ಈ ವೇಳೆ‌ ಮಾದರಿ ಚುನಾವಣಾ ನೀತಿ ಸಂಹಿತೆ ಅಧಿಕಾರಿಯಾಗಿದ್ದ ವಿ.ಕೃಷ್ಣ, ಯಶವಂತಪುರ ಠಾಣೆ ಪೊಲೀಸರಿಗೆ ದೂರೊಂದನ್ನು ಸಲ್ಲಿಸಿದ್ದರು. ‘ಮುತ್ಯಾಲನಗರ ವಾರ್ಡ್ ನಂ.17ರ ವ್ಯಾಪ್ತಿಯ ಜೆ.ಪಿ.ಪಾರ್ಕ್ ಹಿಂಭಾಗದ ಗೇಟ್ ಬಳಿ 2018ರ ಮೇ 27ರಂದು ಮಧ್ಯಾಹ್ನ 12.30ರ ಸಮಯದಲ್ಲಿ ಪ್ರಶಾಂತ ರೆಡ್ಡಿ ಎಂಬುವರು ಕಾರಿನಲ್ಲಿ ₹ 2 ಸಾವಿರ ಮುಖಬೆಲೆಯ ₹ 1 ಲಕ್ಷ ಇಟ್ಟುಕೊಂಡಿದ್ದರು. ಅವರ ಬಳಿ ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡರ 390 ಪ್ರಚಾರ ಪತ್ರಗಳು, ಬಿಜೆಪಿಯ ಟೋಪಿ, ಐದು ಕೇಸರಿ ಮತ್ತು ಬಿಳಿ ಬಣ್ಣದ ಟೋಪಿಗಳು, ಎರಡು ಕೇಸರಿ ಬಣ್ಣದ ಶಾಲುಗಳಿದ್ದವು' ಎಂದು ಆರೋಪಿಸಲಾಗಿತ್ತು.

‘ಇದು ನೀತಿ ಸಂಹಿತೆ ಉಲ್ಲಂಘನೆ. ಮತದಾರರಿಗೆ ಹಂಚಲು ಈ ಹಣ ತಂದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದೂ ಕೋರಿದ್ದರು.

ದೂರನ್ನು ಆಧರಿಸಿ ಪ್ರಶಾಂತ್ ರೆಡ್ಡಿ ಮತ್ತು ಮುನಿರಾಜುಗೌಡ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ತನಿಖೆ ಪೂರ್ಣಗೊಳಿಸಿ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.