ADVERTISEMENT

ಸಿದ್ದರಾಮಯ್ಯ ಸೇರಿ 24 ಮಂದಿಗೆ ಹೈಕೋರ್ಟ್ ನೋಟಿಸ್‌

ಪೊಲೀಸ್‌ ವರ್ಗಾವಣೆಗೆ ಕಾನೂನು ಬಾಹಿರ ಶಿಫಾರಸು ಆರೋಪ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 9:16 IST
Last Updated 21 ಆಗಸ್ಟ್ 2019, 9:16 IST
   

ಬೆಂಗಳೂರು: ‘ಕಾನೂನು ಬಾಹಿರವಾಗಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸು ಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ 24 ಮಂದಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

‘ಈ ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸು ಮಾಡಿರುವ ರಾಜ್ಯದ 24 ಜನಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಮತ್ತು ಅವರ ವಿರುದ್ಧ ಎಸ್‌ಐಟಿ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಅಖಿಲ ‘ಕರ್ನಾಟಕ ಪೊಲೀಸ್ ಮಹಾಸಂಘ’ದ ಅಧ್ಯಕ್ಷ ವಿ. ಶಶಿಧರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಶಾಸಕರಾದ ಸಿದ್ದರಾಮಯ್ಯ ದಿನೇಶ್ ಗುಂಡೂರಾವ್, ರಾಮಲಿಂಗಾ ರೆಡ್ಡಿ, ಆರ್. ನರೇಂದ್ರ, ಬಿ. ನಾಗೇಂದ್ರ, ಶಾಮನೂರು ಶಿವಶಂಕರಪ್ಪ, ಎನ್.ಎ. ಹ್ಯಾರಿಸ್, ಡಾ. ಯತೀಂದ್ರ, ಬಿ.ಎಸ್. ಸುರೇಶ್, ಅನಿಲ್ ಚಿಕ್ಕಮಾದು, ಅಖಂಡ ಶ್ರೀನಿವಾಸ ಮೂರ್ತಿ, ಎಸ್.ಎನ್.ಸುಬ್ಬಾರೆಡ್ಡಿ, ಬಿ.ಕೆ. ಸಂಗಮೇಶ್ವರ, ಸುರೇಶ್ ಗೌಡ, ವಿ. ಮುನಿಯಪ್ಪ, ಎಂ.ಕೃಷ್ಣಪ್ಪ, ಬಿ.ಶಿವಣ್ಣ, ಕನೀಝ್ ಫಾತಿಮಾ, ಸಂಸದ ಡಾ. ಉಮೇಶ್ ಜಾಧವ್, ಮಾಜಿ ಶಾಸಕ ಸಂತೋಷ್ ಲಾಡ್ ಮತ್ತು ಸದ್ಯ ಅನರ್ಹಗೊಂಡಿರುವ ಶಾಸಕ ರೋಷನ್ ಬೇಗ್, ಡಾ. ಕೆ. ಸುಧಾಕರ್ ಹಾಗೂ ಮುನಿರತ್ನ ಅವರಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ADVERTISEMENT

‘ಪೊಲೀಸ್ ಸಿಬ್ಬಂದಿ ನೇಮಕಾತಿ ಮಂಡಳಿಯ ಮೂಲಕವೇ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಮತ್ತೊಂದು ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.