ADVERTISEMENT

ಮಾನಸಿಕ ಅಸ್ವಸ್ಥನ ನೆರವಿಗೆ ಬಂದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 20:35 IST
Last Updated 18 ಫೆಬ್ರುವರಿ 2019, 20:35 IST

ಬೆಂಗಳೂರು: ಮಾನಸಿಕ ಅಸ್ವಸ್ಥ ಬಾಲಕನೊಬ್ಬನ ಬಡತನ ಮತ್ತು ಕುಟುಂಬದ ದುಃಸ್ಥಿತಿಗೆ ಸ್ಪಂದಿಸಿರುವ ಹೈಕೋರ್ಟ್‌ ಆತನ ಆರೋಗ್ಯ ಸುಧಾರಣೆ ಹಾಗೂ ಪೋಷಣೆ ಜವಾಬ್ದಾರಿಯನ್ನು ಸರ್ಕಾರದ ಹೆಗಲಿಗೆ ಹೊರಿಸಿದೆ.

ಬೆಂಗಳೂರಿನ 14 ವರ್ಷದ ಎಸ್.ಸಂತೋಷ್ 2018ರ ಜುಲೈ 21ರಂದು ನಾಪತ್ತೆಯಾಗಿದ್ದ. ಈತನ ತಾತ ಜೋಸೆಫ್ ಈ ಕುರಿತಂತೆ ಕೆಂಗೇರಿ ಗೇಟ್ ಉಪ ವಿಭಾಗದ ಅನ್ನಪೂಣೇಶ್ವರಿ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ, ಸಂತೋಷ್ ಪತ್ತೆಯಾಗದ ಕಾರಣ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ನಿರ್ದೇಶನದ ಮೇರೆಗೆ ಪೊಲೀಸರು ಬಾಲಕನ ಪತ್ತೆ ಕಾರ್ಯಾಚರಣೆ ನಡೆಸಿದಾಗ, ಆತ ಬೆಂಗಳೂರಿನಲ್ಲಿ ರೈಲು ಹತ್ತಿ ಮೈಸೂರಿಗೆ ಹೋಗಿದ್ದುದು ತಿಳಿದು ಬಂದಿತು. ರೈಲ್ವೆ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಬಾಲಕನನ್ನು ಪತ್ತೆ ಹಚ್ಚಿ ಸೋಮವಾರ ಕೋರ್ಟ್‌ಗೆ ಹಾಜರುಪಡಿಸಿದರು.

ADVERTISEMENT

ವಿಚಾರಣೆ ವೇಳೆ, ಹೆಚ್ಚುವರಿ ಅಡ್ವೋಕೇಟ್ ಜನರಲ್ ಸಂದೇಶ್ ಚೌಟ, ‘ಸಂತೋಷ್ ಶೇ 50ರಷ್ಟು ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿದ್ದಾನೆ. ಆತನ ಬುದ್ಧಿ (ಐ.ಕ್ಯೂ) ಮಟ್ಟ ಶೇ 51ರಷ್ಟಿದೆ’ ಎಂಬ ನಿಮ್ಹಾನ್ಸ್ ಆಸ್ಪತ್ರೆ ವೈದ್ಯರ ಪ್ರಮಾಣಪತ್ರವನ್ನು ಕೋರ್ಟ್‌ಗೆ ಸಲ್ಲಿಸಿದರು.

‘ಬಾಲಕನಿಗೆ ತಂದೆ ಇಲ್ಲ. ತಾಯಿಯೂ ಮಾನಸಿಕ ಅಸ್ವಸ್ಥಳು. ತಾತನೊಬ್ಬನೇ ಆಸರೆ. ಮನೆಯಲ್ಲಿ ಕಡುಬಡತನವಿದೆ. ಬಾಲಕನಿಗೆ ಚಿಕಿತ್ಸೆ ಕೊಡಿಸಿ ಆತನನ್ನು ಪೋಷಿಸುವ ಸಾಮರ್ಥ್ಯ ತಾತನಿಗೆ ಇಲ್ಲ. ಆದ್ದರಿಂದ ಬಾಲಕನ ರಕ್ಷಣೆ, ಪೋಷಣೆಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸುವ ಬಗ್ಗೆ ನ್ಯಾಯಪೀಠ ಪರಿಶೀಲಿಸಬಹುದು’ ಎಂದು ವಿವರಿಸಿದರು.

ಇದನ್ನು ಪರಿಗಣಿಸಿದ ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಮತ್ತು ಕೆ.ನಟರಾಜನ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಸಂತೋಷ್‌ನನ್ನು ನಿಮ್ಹಾನ್ಸ್ ಬಳಿಯ ಸುಧಾರಣಾ ಸಂಸ್ಥೆ ಸಂಕೀರ್ಣದಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಬೇಕು. ಬಾಲಕನನ್ನು ಭೇಟಿ ಮಾಡಲು ಆತನ ತಾಯಿ ಹಾಗೂ ತಾತ ಬಂದರೆ, ಅದಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ನಿರ್ದೇಶಿಸಿ ಅರ್ಜಿ ವಿಲೇವಾರಿ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.