ADVERTISEMENT

ಸಾಲ ಸಿಗದಿರುವುದೇ ಆರ್ಥಿಕ ಮುಗ್ಗಟ್ಟಿಗೆ ಕಾರಣ: ಸಚಿವ ಎಚ್.ಕೆ.ಪಾಟೀಲ

ಅಶೋಕನಗರ ಸಹಕಾರ ಬ್ಯಾಂಕಿನ  ಸುವರ್ಣ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 19:56 IST
Last Updated 14 ಸೆಪ್ಟೆಂಬರ್ 2025, 19:56 IST
‘ಸಹಕಾರ ರತ್ನ’ ಪ್ರಶಸ್ತಿ ಪಡೆದ ಕೆ.ಎಂ.ನಾಗರಾಜ್ ಅವರನ್ನು ಅಶೋಕನಗರ ಸಹಕಾರ ಬ್ಯಾಂಕ್ ನಿಯಮಿತದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಎಚ್.ಕೆ.ಪಾಟೀಲ, ಎಲ್.ಎ. ರವಿಸುಬ್ರಹ್ಮಣ್ಯ  ಸನ್ಮಾನಿಸಿದರು. ಎಚ್.ಎಂ.ರೇವಣ್ಣ ಉಪಸ್ಥಿತರಿದ್ದರು.
‘ಸಹಕಾರ ರತ್ನ’ ಪ್ರಶಸ್ತಿ ಪಡೆದ ಕೆ.ಎಂ.ನಾಗರಾಜ್ ಅವರನ್ನು ಅಶೋಕನಗರ ಸಹಕಾರ ಬ್ಯಾಂಕ್ ನಿಯಮಿತದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಎಚ್.ಕೆ.ಪಾಟೀಲ, ಎಲ್.ಎ. ರವಿಸುಬ್ರಹ್ಮಣ್ಯ  ಸನ್ಮಾನಿಸಿದರು. ಎಚ್.ಎಂ.ರೇವಣ್ಣ ಉಪಸ್ಥಿತರಿದ್ದರು.   

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್‍ಗಳು ಬೀದಿಬದಿ ವ್ಯಾಪಾರಿಗಳಿಗೆ, ಸಣ್ಣ ಉದ್ಯಮ ನಡೆಸುವರಿಗೆ ಸಾಲ ಸೌಲಭ್ಯ ನೀಡದ ಕಾರಣ  ರಾಷ್ಟ್ರದಲ್ಲಿ ನಿರುದ್ಯೋಗ, ಬಡತನ, ಆರ್ಥಿಕ ಮುಗ್ಗಟ್ಟು ಬೇರೂರಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅಶೋಕನಗರ ಸಹಕಾರ ಬ್ಯಾಂಕಿನ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಸಹಕಾರ ಬ್ಯಾಂಕ್‍ಗಳ ಹೊಸ ಶಾಖೆಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರ ಅಡ್ಡಿಪಡಿಸಿದ್ದವು. ಸಹಕಾರ ಸಂಘಗಳ ಬ್ಯಾಂಕ್, ಪಟ್ಟಣ ಬ್ಯಾಂಕ್‍ಗಳನ್ನು ತೆರೆಯಲು ಅನುಮತಿ ನೀಡದೆ ಮುಚ್ಚಿಸಲು ಮುಂದಾಗಿದ್ದವು. ಈಗ ರಿಸರ್ವ್‌ ಬ್ಯಾಂಕ್‌ಗೆ ಜ್ಞಾನೋದಯವಾಗಿ ಶಾಖೆಗಳನ್ನು ತೆರೆಯಲು ಅನುಮತಿ ನೀಡಿರುವುದು ಆರೋಗ್ಯಕರ ಬೆಳವಣಿಗೆ ಎಂದು ತಿಳಿಸಿದರು.

ADVERTISEMENT

ಪಟ್ಟಣ ಸಹಕಾರ ಬ್ಯಾಂಕ್‍ಗಳಲ್ಲಿಯೂ ಬೀದಿ ಬದಿಯ ವ್ಯಾಪಾರಿಗಳು, ಸಣ್ಣ ಉದ್ಯಮದಾರರಿಗೆ ಸಾಲ ಸೌಲಭ್ಯ ನೀಡದೆ ಬಲಿಷ್ಠರಿಗೆ, ವೇತನದಾರರಿಗೆ, ಹಣವಂತರಿಗೆ ಮಣೆ ಹಾಕುವ ಕೆಲಸವಾಗುತ್ತಿತ್ತು. ಸಹಕಾರ ಕ್ಷೇತ್ರ ಬಹು ಎತ್ತರಕ್ಕೆ ಬೆಳೆಯಬೇಕಾದರೆ ಉದ್ಯೋಗ ಸೃಷ್ಟಿಗಾಗಿ ಶೇ 10ರಷ್ಟು ಸಾಲ ನೀಡಲು ಒತ್ತು ನೀಡಬೇಕು. ಬಡ್ಡಿ ವ್ಯವಹಾರ ಮಾಡುವವರು ಮುಂಜಾನೆ ಬೀದಿಬದಿ ವ್ಯಾಪಾರಿಗಳಿಗೆ ₹900 ಕೊಟ್ಟು ಸಂಜೆ ₹1 ಸಾವಿರ ತೆಗೆದುಕೊಳ್ಳುತ್ತಾರೆ. ಅಂತಹ ಬಡವರಿಗೆ ಬೀದಿ ಬದಿ ವ್ಯಾಪಾರಿಗಳಿಗೆ ಸಣ್ಣ ಉದ್ದಿಮೆ ಮಾಡುವವರಿಗೆ ಸಹಕಾರ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡಿದ್ದರೆ ಸಹಕಾರ ಬ್ಯಾಂಕ್‍ಗಳು ಬೃಹದಾಕಾರವಾಗಿ ಬೆಳೆಯುತ್ತಿದ್ದವು ಎಂದರು.

ಅಶೋಕನಗರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಎಂ. ನಾಗರಾಜ್ ಮಾತನಾಡಿ, ‘ಬ್ಯಾಂಕ್‌ ಇಂದು ₹150 ಕೋಟಿ ವಹಿವಾಟು ನಡೆಸುತ್ತಿದೆ. ಎಲ್ಲರ ಸಹಕಾರದಿಂದ ಐದು ವರ್ಷಗಳಲ್ಲಿ ₹500 ಕೋಟಿಗೆ ತಲು‍ಪಿಸುವ ಗುರಿ ಇದೆ. ಹಲವು ಶಾಖೆಗಳನ್ನು ತೆರೆಯಲಾಗುವುದು’ ಎಂದರು.

ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ‘ಸುವರ್ಣ ಕಿರಣ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ, ಬ್ಯಾಂಕ್ ಉಪಾಧ್ಯಕ್ಷ ಪಿ.ಆರ್. ಚಂದ್ರಶೇಖರ್, ಕಾರ್ಯದರ್ಶಿ ಎಸ್.ಟಿ.ಮಂಗಳ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.