ADVERTISEMENT

ಹಸಿರು ವೈಭವಕ್ಕೆ ಮರಳಲು ಅಣಿಯಾಗುತ್ತಿದೆ ಕೆರೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 19:41 IST
Last Updated 15 ಫೆಬ್ರುವರಿ 2019, 19:41 IST
ಹೊಸಕೆರೆಹಳ್ಳಿ ಕೆರೆಯ ದಡದಲ್ಲಿ ನಡಿಗೆ ಪಥ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ
ಹೊಸಕೆರೆಹಳ್ಳಿ ಕೆರೆಯ ದಡದಲ್ಲಿ ನಡಿಗೆ ಪಥ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ   

ಬೆಂಗಳೂರು: ಮೂರು ದಶಕಗಳ ಬಳಿಕ ದಕ್ಷಿಣ ಬೆಂಗಳೂರಿನಹೊಸಕೆರೆಹಳ್ಳಿ ಕೆರೆ ಹಸಿರು ವೈಭವಕ್ಕೆ ಮತ್ತೆ ಮರಳಲು ಅಣಿಯಾಗುತ್ತಿದೆ.

ಕೆರೆಗೆ ಮರುಜೀವ ನೀಡಲು ಮುಂದಾಗಿರುವಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿ ಕಾರ್ಯ
ಗಳನ್ನು ಕೈಗೆತ್ತಿಕೊಂಡಿದೆ. ಕೆರೆಯ ಸುತ್ತ ಬೇಲಿ ಹಾಕುವುದು, ನಡಿಗೆ ಪಥ ನಿರ್ಮಾಣ ಮತ್ತು ಕೆರೆ ಸೇರುವ ಕೊಳಚೆ ನೀರನ್ನು ಬೇರೆಡೆ ತಿರುಗಿಸಿ ಉದ್ಯಾನಕ್ಕೆ ಬಳಸಿಕೊಳ್ಳುವ ಕಾಮಾಗಾರಿಗಳನ್ನು ಅನುಷ್ಠಾನಗೊಳಿಸುತ್ತಿದೆ.

ಎರಡು ವರ್ಷಗಳ ಹಿಂದೆ ಕೆರೆಯನ್ನು ಅಭಿವೃದ್ಧಿಗೊಳಿಸಲಾಗಿತ್ತು. ನಿರ್ವಹಣೆ ಕೊರತೆ ಕಾರಣ ಕೆಲವೇ ತಿಂಗಳಲ್ಲಿಮತ್ತೆ ಹಾಳಾಗಿತ್ತು. ಕಸ ಹಾಗೂ ಕಟ್ಟಡ ತ್ಯಾಜ್ಯ ಬಿಸಾಡುವ ತಾಣವಾಗಿ ಮಾರ್ಪಟ್ಟಿತ್ತು. ಈ ಪರಿಸರ ದುರ್ನಾತ ಬೀರುತ್ತಿತ್ತು.

ADVERTISEMENT

‘ಕೆಂಪಾಂಬುಧಿ ಕೆರೆಯ ಮಾದರಿಯಲ್ಲಿ ಈದನ್ನೂ ಅಭಿವೃದ್ಧಿಪಡಿಸುತ್ತಿದ್ದೇವೆ. ಕಸ ಸುರಿಯುವವರ ಮೇಲೆ ಕಣ್ಗಾವಲಿಟ್ಟಿದ್ದೇವೆ. ಇಂತಹ ಕೃತ್ಯ ತಡೆಯಲು ಜಲಮೂಲದ ಸುತ್ತ ಬೇಲಿ ನಿರ್ಮಿಸುತ್ತಿದ್ದೇವೆ. ಕೊಳಚೆ ನೀರು ಕೆರೆ ಒಡಲನ್ನು ಸೇರದಂತೆ ತಡೆಯಲು ಜಲಮಂಡಳಿ ಪ್ರತ್ಯೇಕ ಕೊಳವೆ ಮಾರ್ಗವನ್ನು ನಿರ್ಮಿಸುತ್ತಿದೆ. ಕಾಮಗಾರಿ ಜುಲೈನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಕೆರೆಯ ಅಭಿವೃದ್ಧಿಗೆ ₹ 9.40 ಕೋಟಿ ಮಂಜೂರಾಗಿದೆ. ಕೆರೆ ಒತ್ತುವರಿ ತೆರವುಗೊಳಿಸಲಾಗಿದೆ. ಕೆರೆಯ ಮೇರೆಯನ್ನು ಗುರುತಿಸಲಾಗಿದೆ. ನಡಿಗೆ ಪಥ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಮಳೆ ನೀರು ಚರಂಡಿಯ ದಿಕ್ಕನ್ನು ತಿರುಗಿಸಲಾಗಿದೆ. ಹೆಚ್ಚುವರಿ ನೀರು ಹೊರಹರಿಯಲು ಇದ್ದ ತೂಬನ್ನು ತೆರವುಗೊಳಿಸಿದ್ದೇವೆ. ಮಳೆಗಾಲಕ್ಕೆ ಮುನ್ನ ಕೆಲಸ ಮುಗಿಸುವ ಗುರಿ ಇಟ್ಟುಕೊಂಡಿದ್ದೇವೆ. ಮುಂದಿನ ಮಳೆಗಾಲದಲ್ಲಿ ಕೆರೆಯಲ್ಲಿ ನೀರನ್ನು ಸಂಗ್ರಹಿಸಬಹುದು’ ಎಂದು ಬಿಡಿಎಕಾರ್ಯನಿರ್ವಾಹಕ ಎಂಜಿನಿಯರ್‌ ಗೋಪಾಲಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.