ADVERTISEMENT

ಪಾನಮತ್ತ ಚಾಲಕನಿಂದ ಅಡ್ಡಾದಿಡ್ಡಿ ಚಾಲನೆ: ಜನರತ್ತ ನುಗ್ಗಿದ ಕಾರು, 7 ಮಂದಿಗೆ ಗಾಯ

ಮೂವರು ಗಂಭೀರ ; ಪಾನಮತ್ತ ಚಾಲಕ ಬಂಧನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 4:07 IST
Last Updated 19 ಆಗಸ್ಟ್ 2019, 4:07 IST
ಕಾರು ಗುದ್ದುತ್ತಿದ್ದಂತೆ ಸ್ಥಳದಲ್ಲೇ ಹಾರಿಬಿದ್ದ ಪಾದಚಾರಿಗಳು 
ಕಾರು ಗುದ್ದುತ್ತಿದ್ದಂತೆ ಸ್ಥಳದಲ್ಲೇ ಹಾರಿಬಿದ್ದ ಪಾದಚಾರಿಗಳು    

ಬೆಂಗಳೂರು: ಪಾನಮತ್ತ ಚಾಲಕನೊಬ್ಬ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಹೋಟೆಲ್‌ಗೆ ನುಗ್ಗಿಸಿದ್ದರಿಂದ ಏಳು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಎಚ್‌ಎಸ್‌ಆರ್‌ ಲೇಔಟ್‌ 7ನೇ ಹಂತದ 17ನೇ ಮುಖ್ಯರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

ನಿರ್ಲಕ್ಷ್ಯದಿಂದ ಅತಿ ವೇಗದಲ್ಲಿ ವಾಹನ ಚಲಾಯಿಸಿದ ಆರೋಪದಡಿ ಚಾಲಕ ರಾಜೇಂದ್ರನನ್ನು (40) ಬಂಧಿಸಿರುವ ಎಚ್‌ಎಸ್‌ಆರ್‌ ಠಾಣೆ ಸಂಚಾರ ಪೊಲೀಸರು, ಕಾರನ್ನೂ ಜಪ್ತಿ ಮಾಡಿದ್ದಾರೆ.

ADVERTISEMENT

‘ಅಪಘಾತದಲ್ಲಿ ರಘು, ಅಂಕಿತ್ ಹಾಗೂ ಚಂದ್ರಕಾಂತ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರು ಗ್ರೀನ್ ವ್ಹೀವ್ ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಮಹಿಳೆಯರು ಸೇರಿದಂತೆ ನಾಲ್ವರು ಗಾಯಾಳುಗಳು ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ’ ಎಂದು ಹೇಳಿದರು.

ಫುಟ್‌ಪಾತ್‌ ಏರಿ ಹೋಟೆಲ್‌ಗೆ ನುಗ್ಗಿದ ಕಾರು: ‘ವೃತ್ತಿಯಲ್ಲಿ ಚಾಲಕನಾಗಿರುವ ರಾಜೇಂದ್ರ, ಉದ್ಯಮಿಯೊಬ್ಬರ ಕಾರನ್ನು ಪಡೆದು ಬಾಡಿಗೆಗೆ ಓಡಿಸುತ್ತಿದ್ದ. ಭಾನುವಾರ ಮಧ್ಯಾಹ್ನವೇ ಮದ್ಯ ಸೇವಿಸಿದ್ದ ಆತ, ಅದೇ ಕಾರು ಚಲಾಯಿಸಿಕೊಂಡು 17ನೇ ಮುಖ್ಯರಸ್ತೆಗೆ ಬಂದಿದ್ದ’

‘ರಸ್ತೆ ಪಕ್ಕದಲ್ಲೇ ರೆಡ್ಡಿ ಹೋಟೆಲ್‌ ಇದ್ದು, ಅಲ್ಲಿ 30ಕ್ಕೂ ಹೆಚ್ಚು ಮಂದಿ ಊಟ ಮಾಡುತ್ತಿದ್ದರು. ಎದುರಿನ ಫುಟ್‌ಪಾತ್‌ ಮೇಲೂ ಜನರ ಓಡಾಟವಿತ್ತು. ಅದೇ ಸಂದರ್ಭದಲ್ಲಿ ಅಡ್ಡಾದಿಯಾಗಿ ಕಾರು ಚಲಾಯಿಸಿಕೊಂಡು ಬಂದಿದ್ದ ಚಾಲಕ ರಾಜೇಂದ್ರ, ಪಾರ್ಕಿಂಗ್‌ ಜಾಗದಲ್ಲಿದ್ದ ದ್ವಿಚಕ್ರವಾಹನಗಳಿಗೆ ಡಿಕ್ಕಿ ಹೊಡೆಸಿದ್ದ. ನಂತರ, ಕಾರನ್ನು ಫುಟ್‌ಪಾತ್‌ಗೆ ಹತ್ತಿಸಿ ಪಾದಚಾರಿಗಳಿಗೆ ಗುದ್ದಿ ಅವರ ಸಮೇತವೇ ಹೋಟೆಲ್‌ಗೆ ಕಾರು ನುಗ್ಗಿಸಿದ್ದ. ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಹೋಟೆಲ್‌ನೊಳಗೆ ಕಾರು ಸಿಲುಕಿಕೊಂಡಿತ್ತು. ಚಾಲಕ ರಾಜೇಂದ್ರ, ಕಾರಿನೊಳಗೇ ಕುಳಿತುಕೊಂಡಿದ್ದ. ಆತನನ್ನು ಹೊರಗೆ ಕರೆತಂದ ಸ್ಥಳೀಯರು, ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಹೋದ ಸಿಬ್ಬಂದಿ, ಆರೋಪಿಯನ್ನು ವಶಕ್ಕೆ ಪಡೆದರು. ಗಾಯಾಳುಗಳನ್ನೂ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಕಳುಹಿಸಿದರು’ ಎಂದು ವಿವರಿಸಿದರು.

ಕ್ಯಾಮೆರಾದಲ್ಲಿ ಸೆರೆ: ಅಪಘಾತದ ವಿಡಿಯೊ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

‘ಫುಟ್‌ಪಾತ್ ಏರಿದ್ದ ಕಾರು ತಮಗೆ ಗುದ್ದುತ್ತಿದ್ದಂತೆ ಪಾದಚಾರಿಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಆ ದೃಶ್ಯವೂ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎರಡೂ ಬೈಕ್‌ಗಳು ಜಖಂಗೊಂಡಿವೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ಮಾಲೀಕರ ವಿಚಾರಣೆ

‘ಕಾರಿನ ಮಾಲೀಕರು ಯಾರು ಎಂಬುದನ್ನು ಪತ್ತೆ ಮಾಡಲಾಗಿದ್ದು, ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಿದ್ದೇವೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಯೇ ಕಾರು ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದ. ಅಪಘಾತದ ವೇಳೆ ಆತನೊಬ್ಬನೇ ಕಾರಿನಲ್ಲಿದ್ದ. ಹೀಗಾಗಿ ಆತನ ವಿರುದ್ಧವಷ್ಟೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.