ಬೆಂಗಳೂರು: ಸರ ಕಳವು ಪ್ರಕರಣದಲ್ಲಿ ಗರ್ಭಿಣಿ ಮತ್ತು ಅವರ ಒಂದೂವರೆ ವರ್ಷದ ಮಗುವನ್ನು ಠಾಣೆಯಲ್ಲಿ ತಡರಾತ್ರಿವರೆಗೂ ಇರಿಸಿ ವಿಚಾರಣೆ ನಡೆಸಿದ ಆರೋಪದ ಮೇರೆಗೆ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಕೆ.ಆರ್.ಪುರ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಮಂಗಳವಾರ ಸಂಜೆ 6 ಗಂಟೆಗೆ ಮಾನವ ಹಕ್ಕುಗಳ ಆಯೋಗದ ಡಿವೈಎಸ್ಪಿ ಸುಧೀರ್ ಹೆಗ್ಡೆ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ ವೇಳೆ, ಗರ್ಭಿಣಿ ಮತ್ತು ಮಗುವನ್ನು ಠಾಣೆಯಲ್ಲೇ ಇರಿಸಿಕೊಂಡಿದ್ದು ಗೊತ್ತಾಗಿತ್ತು.
‘ಗರ್ಭಿಣಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಅವರಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಠಾಣೆಯ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುವುದು. ಯಾವ ಪ್ರಕರಣದಲ್ಲಿ ಕರೆ ತರಲಾಗಿದೆ? ಎಷ್ಟು ಹೊತ್ತು ವಿಚಾರಣೆ ನಡೆಸಲಾಗಿದೆ ಎಂಬ ಮಾಹಿತಿ ನೀಡುವಂತೆ ಸೂಚಿಸಿ ಠಾಣಾಧಿಕಾರಿಗೆ ನೋಟಿಸ್ ನೀಡಲಾಗಿದೆ. ಜೊತೆಗೆ ಮಹಿಳಾ ಸ್ವಾಧಾರ ಗೃಹಕೇಂದ್ರದಿಂದ ಕೆಲವೊಂದು ಮಾಹಿತಿ ಕೇಳಲಾಗಿದೆ’ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಕೆ.ಆರ್.ಪುರ ಠಾಣಾ ವ್ಯಾಪ್ತಿಯ ಸೀಗೆಹಳ್ಳಿ ಬಳಿ ಮನೆಯೊಂದರಲ್ಲಿ ವಾಸವಾಗಿದ್ದ ಸಂತ್ರಸ್ತೆಗೆ ಪಕ್ಕದ ಮನೆಯ ಮಹಿಳೆಯೊಬ್ಬರು ಮನೆಯ ಕೀ ಕೊಟ್ಟು ಹೋಗಿದ್ದರು. ಊರಿನಿಂದ ವಾಪಸ್ ಮನೆಗೆ ಬಂದಾಗ ಬೀರುವಿನಲ್ಲಿಟ್ಟಿದ್ದ ಚಿನ್ನದ ಸರ ಕಳವಾಗಿತ್ತು. ಈ ಬಗ್ಗೆ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದರು.
ಶಂಕೆಯ ಮೇರೆಗೆ ಸಂತ್ರಸ್ತ ಮಹಿಳೆಯನ್ನು ಠಾಣೆಗೆ ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕರೆದೊಯ್ದು ರಾತ್ರಿ11 ಗಂಟೆವರೆಗೂ ವಿಚಾರಣೆ ನಡೆಸಿದ್ದರು. ಬಳಿಕ ಮಹಿಳಾ ಸ್ವಾಧಾರ ಗೃಹಕೇಂದ್ರಕ್ಕೆ ಕಳುಹಿಸಿದ್ದರು. ಮಂಗಳವಾರ ಬೆಳಿಗ್ಗೆಯಿಂದ ಸಂಜೆವರೆಗೂ ವಿಚಾರಣೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಈ ಕುರಿತು ಸಂತ್ರಸ್ತೆ ಪತಿ ಭರತ್ ಅವರು ಠಾಣೆಗೆ ಹೋಗಿ ವಿಚಾರಿಸಿದಾಗ ಪೊಲೀಸರು ಸರಿಯಾಗಿ ಸ್ಪಂದಿಸಿರಲಿಲ್ಲ. ಪತ್ನಿ ಭೇಟಿಗೂ ಅವಕಾಶ ನೀಡಿರಲಿಲ್ಲ. ಹಾಗಾಗಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು.
‘ಮಾನವ ಹಕ್ಕುಗಳ ಆಯೋಗದ ಡಿವೈಎಸ್‌ಪಿ ಅವರು ಸಂಜೆ 4 ಗಂಟೆಗೆ ಠಾಣೆಗೆ ಭೇಟಿ ನೀಡಿದಾಗ ಗರ್ಭಿಣಿ ಹಾಗೂ ಮಗು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ತೆರಳಿದ್ದರು. ತಡರಾತ್ರಿವರೆಗೂ ವಿಚಾರಣೆ ನಡೆಸಿಲ್ಲ’ ಎಂದು ಕೆ.ಆರ್.ಪುರ ಠಾಣೆ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.