ADVERTISEMENT

ಒಬ್ಬ ಸಂತ್ರಸ್ತನ ರಕ್ಷಿಸಿದರೂ ಬದುಕು ಸಾರ್ಥಕ: ನ್ಯಾಯಮೂರ್ತಿ ನಾರಾಯಣಸ್ವಾಮಿ

ಮಾನವ ಸಾಗಣೆ ನಿಯಂತ್ರಣಕ್ಕೆ ಶ್ರಮಿಸಿ: ಕರೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 20:24 IST
Last Updated 17 ಫೆಬ್ರುವರಿ 2019, 20:24 IST

ಬೆಂಗಳೂರು: ‘ನ್ಯಾಯಾಧೀಶರು ತಮ್ಮ ವೃತ್ತಿಜೀವನದಲ್ಲಿ ಎಷ್ಟು ತೀರ್ಪುಗಳನ್ನು ಬರೆದಿದ್ದೇವೆ ಎಂಬುದರ ಜೊತೆಗೆ, ಮಾನವ ಸಾಗಣೆ ಪ್ರಕರಣಗಳಿಂದ ಎಷ್ಟು ಸಂತ್ರಸ್ತರನ್ನು ರಕ್ಷಿಸಿದ್ದೇವೆ ಎಂಬುದನ್ನೂ ಲೆಕ್ಕವಿಡಬೇಕು’ ಎಂದು ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹೇಳಿದರು.

‘ಮಾನವ ಸಾಗಣೆ ನಿಯಂತ್ರಣ’ ವಿಷಯದ ಕುರಿತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಆರ್ಥಿಕ ಸಮಸ್ಯೆಯಿಂದಾಗಿ ಬಡವರು ಮಾರುಕಟ್ಟೆಯ ಸರಕಾಗುತ್ತಿದ್ದಾರೆ. ನ್ಯಾಯಾಂಗದಿಂದ ಬಡತನ ನಿರ್ಮೂಲನೆ ಸಾಧ್ಯವಿಲ್ಲ. ಆದರೆ, ಸಂತ್ರಸ್ತರ ಪರವಾಗಿ ನಿಲ್ಲಲು ಹಾಗೂ ಸರ್ಕಾರಕ್ಕೆ ಮಾರ್ಗದರ್ಶನ ಮಾಡಲು ಸಾಧ್ಯವಿದೆ. ಈ ಕೆಲಸಗಳನ್ನು ಎಲ್ಲ ನ್ಯಾಯಾಂಗ ಅಧಿಕಾರಿಗಳೂ ಚಾಚೂ ತಪ್ಪದೇ ಮಾಡಬೇಕು’ ಎಂದರು.

ADVERTISEMENT

‘ನ್ಯಾಯಾಧೀಶರು, ಪ್ರಾಧಿಕಾರದ ಸದಸ್ಯರು, ಪೊಲೀಸರು ಹಾಗೂ ಇತರೆ ಸರ್ಕಾರಿ ಅಧಿಕಾರಿಗಳೆಲ್ಲ ಒಟ್ಟಾಗಿ, ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಈ ಪಿಡುಗನ್ನು ತೊಡೆದು ಹಾಕಲು ಮುಂದಡಿ ಇಡಬೇಕು. ಈ ವಿಷ ವರ್ತುಲದಿಂದ ಒಬ್ಬ ಸಂತ್ರಸ್ತನನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಿದರೂ ಆ ಅಧಿಕಾರಿಯದ್ದು ಸಾರ್ಥಕ ಬದುಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಹೈಕೋರ್ಟ್ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಅರವಿಂದ ಕುಮಾರ್, ‘ಬಡತನ, ಜಾಗತೀಕರಣ, ಶಿಕ್ಷಣದ ಕೊರತೆಯ ಕಾರಣಗಳಿಂದಾಗಿ ಮಾನವ ಸಾಗಣೆ ಹೆಚ್ಚುತ್ತಿದೆ. ಅದರ ಸುಳಿಗೆ ಸಿಲುಕಿದವರ ಪೈಕಿ ಹೆಚ್ಚಿನವರು ಲೈಂಗಿಕ ಶೋಷಣೆಗೂ ಗುರಿಯಾಗುತ್ತಿದ್ದಾರೆ’ ಎಂದರು.

ಹೈಕೋರ್ಟ್ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್, ರಿಜಿಸ್ಟ್ರಾರ್ ಜನರಲ್ ಶ್ರೀಶಾನಂದ, ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು, ವಿವಿಧ ಠಾಣೆಗಳ ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.