ADVERTISEMENT

ಆಸ್ಪತ್ರೆಗೆ ಸೇರುವಂತೆ ಒತ್ತಡ– ದೂರು ಬಂದರೆ ಕ್ರಮ

ಕೋವಿಡ್‌: ಬಿಬಿಎಂಪಿ ಆಯುಕ್ತರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 20:39 IST
Last Updated 2 ಸೆಪ್ಟೆಂಬರ್ 2020, 20:39 IST
   

ಬೆಂಗಳೂರು: 'ಕೋವಿಡ್‌ ದೃಢಪಟ್ಟವರು ಮನೆಯಲ್ಲೇ ಆರೈಕೆಗೆ ಒಳಗಾಗಲು ಬಯಸಿದರೆ ಅದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಸೋಂಕಿತರು ಆಸ್ಪತ್ರೆಗೆ ದಾಖಲಾಗಲೇ ಬೇಕು ಎಂದು ಅಧಿಕಾರಿಗಳು ಬಲವಂತ ಪಡಿಸಿದ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು‘ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದರು.

ಮನೆಯಲ್ಲೇ ಆರೈಕೆಗೆ ಒಳಗಾಗಲು ಬಯಸುವವರ ಮೇಲೂ ಬಿಬಿಎಂಪಿ ಸಿಬ್ಬಂದಿ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗುವಂತೆ ಒತ್ತಡ ಹೇರುತ್ತಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ‘ಪ್ರತ್ಯೇಕ ಶೌಚಾಲಯ, ಪ್ರತ್ಯೇಕ ಬೆಡ್‌ರೂಂ ವ್ಯವಸ್ಥೆ ಇದ್ದರೆ ಕೋವಿಡ್‌ ಸೋಂಕಿತರು ಮನೆಯಲ್ಲೇ ಆರೈಕೆಗೆ ಒಳಗಾಗಬಹುದು. ಆದರೆ, ಸೋಂಕಿತರಿಗೆ ರೋಗ ಲಕ್ಷಣ ಇರಬಾರದು ಅಥವಾ ಅಲ್ಪ ಲಕ್ಷಣಗಳು ಮಾತ್ರ ಇರಬಹುದು. ಅವರಿಗೆ ಮಧುಮೇಹ, ಹೃದ್ರೋಗ ಮುಂತಾದ ಅನ್ಯ ಕಾಯಿಲೆ ಇರಬಾರದು. ವಯಸ್ಸು 50 ದಾಟಿರಬಾರದು’ ಎಂದು ತಿಳಿಸಿದರು.

‘ಕೋವಿಡ್‌ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವಂತೆ ಮಧ್ಯವರ್ತಿಗಳು ಕರೆ ಮಾಡುತ್ತಾರೆ ಎಂಬುದು ಆಧಾರರಹಿತ ಆರೋಪ. ಸೋಂಕಿತರಿಗೆ ಬಿಬಿಎಂಪಿಯ ನಿಯಂತ್ರಣ ಕೊಠಡಿಗಳಿಂದಲೇ ಕರೆ ಮಾಡಲಾಗುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಕೋವಿಡ್‌ ಪರೀಕ್ಷಾ ವರದಿ ವಿಳಂಬವಾಗುತ್ತಿದೆ ಎಂಬುದನ್ನು ಅಲ್ಲಗಳೆದ ಅವರು, ‘ಎರಡು ದಿನಗಳ ಹಿಂದೆ ನಾನೇ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದೆ. ಸೋಂಕು ಇಲ್ಲ ಎಂಬ ಬಗ್ಗೆ ನನ್ನ ಮೊಬೈಲ್‌ಗೆ ಅದೇ ದಿನ ಸಂದೇಶ ಬಂದಿದೆ. ಈ ಹಿಂದೆ ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆಯಿಂದ ವರದಿ ವಿಳಂಬವಾಗುತ್ತಿದ್ದುದು ನಿಜ. ಈ ಸಮಸ್ಯೆ ನಿವಾರಣೆಯಾಗಿದೆ. ನಿಮ್ಹಾನ್ಸ್‌ ಮತ್ತು ಕಿದ್ವಾಯಿ ಆಸ್ಪತ್ರೆಗಳ ಪ್ರಯೋಗಾಲಯಗಳಿಗೆ ಬಿಬಿಎಂಪಿ ವತಿಯಿಂದಲೇ 23 ಸಿಬ್ಬಂದಿಯನ್ನು ಒದಗಿಸಲಾಗಿದೆ’ ಎಂದರು.

‘ಕಿಟ್‌ಗಳಿಲ್ಲದ ಕಾರಣಕ್ಕೆ ಪರೀಕ್ಷೆ ವಿಳಂಬವಾಗಬಾರದು ಎಂಬ ಕಾರಣಕ್ಕೆ ಬಿಬಿಎಂಪಿಯೇ 1 ಲಕ್ಷ ಕಿಟ್‌ಗಳನ್ನು ಖರೀದಿಸಿ ಇಟ್ಟುಕೊಂಡಿದೆ. ಸರ್ಕಾರದಿಂದ ಪರೀಕ್ಷಾ ಕಿಟ್ ಬರುವುದು ತಡವಾದರೆ ಇದನ್ನು ಬಳಸುತ್ತೇವೆ’ ಎಂದರು.

‘ಮನೆಯಲ್ಲಿ ಆರೈಕೆಗೆ ಒಳಗಾಗುವ ಸೋಂಕಿತರಿಗೆ ಪಲ್ಸ್‌ ಆಕ್ಸಿ ಮೀಟರ್‌, ಉಷ್ಣತಾ ಮಾಪಕ ಮೊದಲಾದ ಪರಿಕರಗಳನ್ನು ಒಳಗೊಂಡ ಪರೀಕ್ಷಾ ಕಿಟ್‌ಗಳನ್ನು ಪಾಲಿಕೆ ಸದಸ್ಯರ ನಿಧಿಯಿಂದಲೇ ಒದಗಿಸಲು ಅನುಮತಿ ನೀಡಲಾಗಿದೆ. ವಾರ್ಡ್‌ ಸಭೆಗಳಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಅನೇಕ ಸದಸ್ಯರು ಕಿಟ್‌ ವಿತರಿಸಲು ಕ್ರಮ ಕೈಗೊಂಡಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.