ಡಿ.ಕೆ ಶಿವಕುಮಾರ್
- ಪ್ರಜಾವಾಣಿ ಚಿತ್ರ
ಬೆಂಗಳೂರು: ‘ನಗರದಲ್ಲಿ ಈ ವರ್ಷದ ಡಿಸೆಂಬರ್ ಅಥವಾ ಮುಂದಿನ ವರ್ಷ ಜನವರಿಯಲ್ಲಿ ಬೆಂಗಳೂರು ಹಬ್ಬ, ಐಫಾ ಪ್ರಶಸ್ತಿ ಸಮಾರಂಭ ನಡೆಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ (ಐಫಾ) ವತಿಯಿಂದ ಉತ್ಸವ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲು ಐಫಾ ಪ್ರತಿನಿಧಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
‘ಒಂದಷ್ಟು ಕಾರ್ಯಕ್ರಮಗಳನ್ನು ಸಂಯೋಜಿಸಿ ಬೆಂಗಳೂರಿನಲ್ಲಿ ಒಂದು ವಾರ ಉತ್ತಮ ವಾತಾವರಣ ಸೃಷ್ಟಿ ಮಾಡುವುದು ನಮ್ಮ ಆದ್ಯತೆಯಾಗಿದೆ. ಜೊತೆಗೆ ಬೆಂಗಳೂರಿನ ಮಹತ್ವ ಸಾರಬೇಕು ಎಂಬುದು ನಮ್ಮ ಆಲೋಚನೆಯಾಗಿದೆ’ ಎಂದರು.
‘ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ಗಿಂತ ನಮ್ಮ ಸ್ಯಾಂಡಲ್‌ವುಡ್ ಎತ್ತರಕ್ಕೆ ಹೋಗಿದೆ. ಇದಕ್ಕೆ ಉತ್ತೇಜನ ಕೊಡಬೇಕು ಎಂಬುದು ನಮ್ಮ ಉದ್ದೇಶ. ಅಕ್ಟೋಬರ್‌ನಲ್ಲಿ ದಸರಾ ಇರುವ ಕಾರಣಕ್ಕೆ ಡಿಸೆಂಬರ್, ಜನವರಿಯಲ್ಲಿ ಐಫಾ ಸಮಾರಂಭ ನಡೆಸಬಹುದು ಎಂದು ತಿಳಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಅವಕಾಶ ಸಿಗಲಿದೆ. ಮುಂಬೈ ಬಿಟ್ಟರೆ ಬೆಂಗಳೂರು ಈ ರೀತಿಯ ಕಾರ್ಯಕ್ರಮಗಳಿಗೆ ಸೂಕ್ತ ಎಂದು ಆಯೋಜಕರು ತಿಳಿಸಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.