ADVERTISEMENT

ಐಐಎಸ್‌ಸಿ ಘಟಿಕೋತ್ಸವ: 856 ವಿದ್ಯಾರ್ಥಿಗಳಿಗೆ ಪದವಿ, 50 ಮಂದಿಗೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 19:33 IST
Last Updated 25 ಜೂನ್ 2018, 19:33 IST
ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು
ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು   

ಬೆಂಗಳೂರು: ‘ಉತ್ತಮ ವಿನ್ಯಾಸಕಾರನಾಗುವ ಕನಸು ಕಟ್ಟಿಕೊಂಡಿದ್ದೇನೆ. ಈಗಾಗಲೇ ಮ್ಯಾಡ್‌ಲ್ಯಾಬ್‌ ಸ್ಟುಡಿಯೊದಲ್ಲಿ ಕೆಲಸ ಸಿಕ್ಕಿದೆ’ ಎಂದು ಪ್ರಾಡಕ್ಟ್‌ ಡಿಸೈನ್‌ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುವ ಶುಭಂ ಸುನಿಲ್‌ರಾವ್‌ ಪಡ್ಕೆ ಸಂಭ್ರಮ ವ್ಯಕ್ತಪಡಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಘಟಿ
ಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಬಳಿಕ ಅವರು ತಮ್ಮ ಸಂತಸ ಹಂಚಿಕೊಂಡರು. 856 ವಿದ್ಯಾರ್ಥಿಗಳು ಪದವಿ ಪಡೆದರು. ಅದರಲ್ಲಿ 50 ವಿದ್ಯಾರ್ಥಿಗಳು ಚಿನ್ನದ ಪದಕದ ಸಾಧನೆ ಮಾಡಿದ್ದಾರೆ.

‘ಯಾವುದೇ ಮೊಬೈಲ್‌ ಆ್ಯಪ್‌ ಇರಲಿ ಅಥವಾ ವೆಬ್‌ಸೈಟ್‌ ಇರಲಿ ಮೊದಲು ವಿನ್ಯಾಸ; ಆ ನಂತರ ಅದರಲ್ಲಿ
ರುವ ಎಂಜಿನಿಯರಿಂಗ್‌ ಕೆಲಸವನ್ನು ಜನರು ಗುರುತಿಸುತ್ತಾರೆ. ಆದ್ದರಿಂದ ಈ ವಿಭಾಗದಲ್ಲಿ ನನಗೆ ಆಸಕ್ತಿ ಬೆಳೆಯಿತು’ ಎಂದು ಮಹಾರಾಷ್ಟ್ರದ ಪಡ್ಕೆ ವಿವರಿಸಿದರು.

ADVERTISEMENT

‘ಯಾವ ವಿನ್ಯಾಸಕ್ಕೆ ಯಾವ ಬಣ್ಣ ಇದ್ದರೆ ಸೂಕ್ತ, ಯಾವ ಚಿಹ್ನೆಗಳನ್ನು ಬಳಸಿದರೆ ಹೆಚ್ಚು ಆಕರ್ಷಕವಾಗಿರುತ್ತದೆ ಎಂಬ ಜ್ಞಾನ ಇದ್ದರೆ ಈ ವೃತ್ತಿಯಲ್ಲಿ ಹೆಸರು ಮಾಡಬಹುದು’ ಎಂದು ಹೇಳಿದರು.

ದೇಶ ಸೇವೆ ಮಾಡುವ ಗುರಿ: ‘ಅಪ್ಪ ನನ್ನಲ್ಲಿ ದೇಶ ಸೇವೆ ಮಾಡುವ ಕನಸು ಬಿತ್ತಿದರು. ಆದ್ದರಿಂದ ನಾನು ವೈಮಾನಿಕ ಎಂಜಿನಿಯರಿಂಗ್‌ ಆಯ್ಕೆ ಮಾಡಿಕೊಂಡೆ. 2010ರಲ್ಲಿಯೇ ನನಗೆ ರಕ್ಷಣಾ ಸಚಿವಾಲಯದಲ್ಲಿ ಉದ್ಯೋಗ ಸಿಕ್ಕಿತ್ತು. ಪದವಿ ಪಡೆಯುವ ಉದ್ದೇಶದಿಂದ ವಿರಾಮ ಪಡೆದುಕೊಂಡಿದ್ದೆ. ಈಗ ಮತ್ತೆ ದೇಶ ಸೇವೆಗೆ ಮರಳುತ್ತೇನೆ’ ಎಂದು ಒಡಿಶಾದ ಸೌಮ್ಯಜಿತ್‌ ಬೆಹ್ರಾ ಹೇಳಿದರು.

‘ಎಲ್ಲರೂ ಖಾಸಗಿ ಸಂಸ್ಥೆಗಳ ಉದ್ಯೋಗದ ಹಿಂದೆ ಬೀಳುತ್ತಾರೆ. ಆದರೆ, ನಾನು ಆ ರೀತಿ ಆಗಬಾರದು ಎಂಬುದು ಅಪ್ಪನ ಆಸೆ. ನಮ್ಮ ದೇಶ, ರಕ್ಷಣಾ ತಂತ್ರಗಳಲ್ಲಿ ಮೇಲಿನ ಸ್ಥಾನದಲ್ಲಿ ಇರಬೇಕು ಎಂಬುದು ನನ್ನ ಕನಸು. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡಲಿದ್ದೇನೆ’ ಎಂದು ಅವರು ಹೇಳಿದರು.

ಬಯೋಕಾನ್‌ ಲಿಮಿಟೆಡ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕಿರಣ್‌ ಮಜುಂದಾರ್‌ ಷಾ,‘ವಿಜ್ಞಾನವನ್ನು ಬಳಸಿಕೊಂಡು ಶಿಕ್ಷಣ ವ್ಯವಸ್ಥೆಯ ಮೂಲಕ ಸಮಾಜವನ್ನು ಪ್ರೇರೇಪಿಸುವ ಕೆಲಸ ಮಾಡಬೇಕು. ವಿಜ್ಞಾನ ಜನಸಾಮಾನ್ಯರನ್ನೂ ತಲುಪಬೇಕು’ ಎಂದರು.

‘ಶಿಕ್ಷಣ ವ್ಯವಸ್ಥೆ ಜನಸಾಮಾನ್ಯರನ್ನೂ ಪ್ರೇರೇಪಿಸಬೇಕು. ವಿಜ್ಞಾನವನ್ನು ಎಲ್ಲರಿಗೂ ತಲುಪುವಂತೆ ಮಾಡಬೇಕಾದುದು ಶಿಕ್ಷಣ ಸಂಸ್ಥೆಗಳ ಕರ್ತವ್ಯ ಆಗಬೇಕು. ಜಾಗತಿಕ ತಾಪ
ಮಾನ, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದಂತಹ ವಿಷಯಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಶಿಕ್ಷಿತ ವರ್ಗ ಇಂತಹ ವಿಷಯಗಳನ್ನು ತಲುಪಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.