ADVERTISEMENT

ರಾಮಮೂರ್ತಿನಗರ: ಎಲ್ಲೆಂದರಲ್ಲಿ ಕಸದ ರಾಶಿ

ಶಿವರಾಜು ಮೌರ್ಯ
Published 17 ಜುಲೈ 2024, 21:21 IST
Last Updated 17 ಜುಲೈ 2024, 21:21 IST
ಕಲ್ಕೆರೆ ಸ್ಮಶಾನ ಮುಂಭಾಗದ ಮುಖ್ಯರಸ್ತೆಯಲ್ಲಿ ಕಸ ರಸ್ತೆ ಚೆಲ್ಲಿರುವುದು.
ಕಲ್ಕೆರೆ ಸ್ಮಶಾನ ಮುಂಭಾಗದ ಮುಖ್ಯರಸ್ತೆಯಲ್ಲಿ ಕಸ ರಸ್ತೆ ಚೆಲ್ಲಿರುವುದು.   

ಕೆ.ಆರ್.ಪುರ: ರಾಮಮೂರ್ತಿನಗರ ವಾರ್ಡಿನ ಹಲವು ಬಡಾವಣೆಗಳಲ್ಲಿ ಬಿಬಿಎಂಪಿ ಸರಿಯಾದ ರೀತಿಯಲ್ಲಿ ಕಸ ನಿರ್ವಹಣೆ ಮಾಡದೇ ಇರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿ ಬೀಳುತ್ತಿದೆ. ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡುವ ಭೀತಿ ಎದುರಾಗಿದೆ.

ರಾಮಮೂರ್ತಿನಗರ, ಎನ್.ಆರ್.ಐ ಬಡಾವಣೆ, ಕಲ್ಕೆರೆ, ಕನಕನಗರ, ಶಾಂತಿ ಬಡಾವಣೆ, ಕೌದೇನಹಳ್ಳಿ, ಕಲ್ಕೆರೆ ಮುಖ್ಯರಸ್ತೆ ಮುಂತಾದೆಡೆಗಳಲ್ಲಿ ಕಸ ವಿಲೇವಾರಿಯನ್ನು ಬಿಬಿಎಂಪಿ ಮಾಡದೇ ಇರುವುದರಿಂದ ಈ ಸಮಸ್ಯೆ ಉಂಟಾಗಿದೆ.

ಬಿಬಿಎಂಪಿಯವರು ಕಸ ಒಯ್ಯಲು ಬಾರದೇ ಇರುವುದರಿಂದ ಜನರು ರಸ್ತೆ ಮೇಲೆಯೇ ಕಸ ಬಿಸಾಡಿ ಹೋಗುತ್ತಿದ್ದಾರೆ. ಜಾನುವಾರುಗಳು ಮತ್ತು ಬೀದಿನಾಯಿಗಳು ಆಹಾರ ಹುಡುಕಲು ಬಂದು ಕಸವನ್ನು ರಸ್ತೆಗೆ ಚೆಲ್ಲುತ್ತಿವೆ. 

ADVERTISEMENT

‘ರಾಮಮೂರ್ತಿನಗರದಲ್ಲಿ‌ ಸ್ವಚ್ಛತೆ ಮರೀಚಿಕೆಯಾಗಿದೆ. ಕೆಲದಿನಗಳಿಂದ ಬಿಬಿಎಂಪಿ ಕಸ ವಿಲೇವಾರಿ ಮಾಡುತ್ತಿಲ್ಲ. ಮಹದೇವಪುರ ವಲಯದಲ್ಲಿ ಡೆಂಗಿ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದೆ’ ಎಂದು ಶಾಂತಿ ಬಡಾವಣೆ ನಿವಾಸಿ ಶಿವಕುಮಾರ್ ತಿಳಿಸಿದರು.

‘ಕಸ ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ಮಳೆಗಾಲದಲ್ಲಿ ಕಸ ಕೊಳೆಯುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸೊಳ್ಳೆಗಳ ನಿಯಂತ್ರಣ ಮಾಡುವ ಔಷಧ ಸಿಂಪಡಿವ ಕೆಲಸವನ್ನೂ ಬಿಬಿಎಂಪಿ ಮಾಡಿಲ್ಲ. ಜನರು ಕಾಯಿಲೆ ಬಿದ್ದು, ಆಸ್ಪತ್ರೆಗೆ ಹೋಗುವುದು ಹೆಚ್ಚಾಗಿದೆ’ ಎಂದು ಬಿಬಿಎಂಪಿ ಮಾಜಿ ಸದಸ್ಯ ಕಲ್ಕೆರೆ ಶ್ರೀನಿವಾಸ್ ದೂರಿದರು.

‘ಸೊಳ್ಳೆ ನಿಯಂತ್ರಣಕ್ಕೆ ಔಷಧ ಸಿಂಪಡಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ.  ಔಷಧ ಬೇಕಾದಷ್ಟು ಸಂಗ್ರಹವಿದ್ದರೂ, ‘ಇಲ್ಲ’ ಎಂದು ಉತ್ತರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಶಿವಕುಮಾರ್
ಕಲ್ಕೆರೆ ಶ್ರೀನಿವಾಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.