ADVERTISEMENT

ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದ ನೆರವು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 19:12 IST
Last Updated 25 ಆಗಸ್ಟ್ 2019, 19:12 IST

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ನೆರವಾಗುವ ಸಲುವಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ಆರ್ಥಿಕ ನೆರವನ್ನು ಶೇ 44ರಷ್ಟು ಹೆಚ್ಚಳ ಮಾಡಿದೆ. ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ಮತ್ತಷ್ಟು ಬಿಗಿಗೊಳಿಸುವುದು, ಬೋಧನೆಗೆ ತಂತ್ರಜ್ಞಾನ ಬಳಕೆ ಹಾಗೂ ಶಿಕ್ಷಕರಿಗೆ ಇಂಗ್ಲಿಷ್ ತರಬೇತಿ ನೀಡಲು ಇದು ನೆರವಾಗಲಿದೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಸಮಗ್ರ ಶಿಕ್ಷಣ ಯೋಜನೆಯಲ್ಲಿ ಅನುದಾನ ನೀಡುತ್ತಿದ್ದು, ಹಿಂದಿನ ವರ್ಷಗಳಲ್ಲಿ ನೀಡುತ್ತಿದ್ದ ಮೊತ್ತವನ್ನು ₹594.19 ಕೋಟಿಯಿಂದ, ಈ ವರ್ಷ ₹860.56 ಕೋಟಿಗೆ ಏರಿಕೆ ಮಾಡಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಂಪನ್ಮೂಲದ ಕೊರತೆ ಎದುರಿಸುತ್ತಿದ್ದ ರಾಜ್ಯ ಸರ್ಕಾರಕ್ಕೆ, ಹೆಚ್ಚಿನ ಆರ್ಥಿಕ ನೆರವು ಸಿಕ್ಕಂತಾಗಿದೆ. ಇದರಿಂದ ಶಾಲಾ, ಕಾಲೇಜುಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವುದು, ಕಲಿಕಾ ಮಟ್ಟ ಹೆಚ್ಚಿಸುವುದು ಸೇರಿದಂತೆ ಒಟ್ಟಾರೆಶಿಕ್ಷಣದ ಗುಣಮಟ್ಟ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

9ರಿಂದ 12ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಆಂತರಿಕ ಪರೀಕ್ಷೆಗಳು ನೆರವಿಗೆ ಬರುತ್ತವೆ. 10ನೇ ತರಗತಿ ತಲುಪುವ ಮಕ್ಕಳು ಬೋರ್ಡ್ ಪರೀಕ್ಷೆ ಎದುರಿಸುವಲ್ಲಿ ವಿಫಲರಾಗುತ್ತಾರೆ. ಈ ಹಂತದಲ್ಲಿ ಸರಿಯಾದ ರೀತಿಯಲ್ಲಿ ತರಬೇತಿ ನೀಡಿ ಸಜ್ಜುಗೊಳಿಸುವುದು ಅಗತ್ಯವಿದೆ ಎಂಬವಿಚಾರವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಮನದಟ್ಟು ಮಾಡಿಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ನೆರವು ಹೆಚ್ಚಳ ಮಾಡಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ತಿಳಿಸಿದ್ದಾರೆ.

ADVERTISEMENT

ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿದ್ದು, 2170 ಇಂಗ್ಲಿಷ್ ಶಿಕ್ಷಕರಿಗೆ ತರಬೇತಿ ನೀಡಿ, ಅವರ ವೃತ್ತಿಪರತೆಯನ್ನು ವೃದ್ಧಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.