ನಮ್ಮ ಮೆಟ್ರೊ
ಬೆಂಗಳೂರು: ಬಸ್ ದರ ಹೆಚ್ಚಳದಿಂದ ಬಸವಳಿದಿದ್ದ ಪ್ರಯಾಣಿಕರಿಗೆ ‘ನಮ್ಮ ಮೆಟ್ರೊ’ ಕೂಡ ದರ ಏರಿಸಿ ಬರೆ ಎಳೆದಿದೆ. ಟಿಕೆಟ್ ದರವನ್ನು ಶೇ 47ರಷ್ಟು (ರಿಯಾಯಿತಿ ಹೊರತುಪಡಿಸಿ) ಹೆಚ್ಚಳ ಮಾಡಿದೆ. ಸ್ಮಾರ್ಟ್‌ಕಾರ್ಡ್‌ದಾರರಿಗೆ ಜನದಟ್ಟಣೆ ಅವಧಿ ಹೊರತುಪಡಿಸಿ ಉಳಿದ ಅವಧಿಗಳಿಗೆ ಮತ್ತು ರಜಾದಿನಗಳಲ್ಲಿ ಶೇ 10ರಷ್ಟು ರಿಯಾಯಿತಿ ನೀಡುತ್ತಿದೆ.
ಪ್ರಯಾಣ ದರವನ್ನು ನಿಲ್ದಾಣದಿಂದ ನಿಲ್ದಾಣಕ್ಕೆ ನಿಗದಿ ಮಾಡುವ ಬದಲು ಕಿಲೋಮೀಟರ್ ಆಧಾರದಲ್ಲಿ ನಿಗದಿ ಮಾಡಲಾಗಿದೆ. ಜೊತೆಗೆ ಆರಂಭಿಕ ನಿಲ್ದಾಣಗಳಿಗೆ ದರ ಹೆಚ್ಚಳ ಮಾಡಿಲ್ಲ. ಆನಂತರ ಪ್ರತಿ 2 ಕಿ.ಮೀ.ಗೆ ₹ 10ರಂತೆ ಹೆಚ್ಚಳ ಮಾಡಿದೆ. ಇದು ಮೊದಲ 10 ಕಿ.ಮೀ.ವರೆಗೆ ಸಂಚರಿಸುವವರಿಗೆ ಅನ್ವಯವಾಗುತ್ತದೆ. 10 ಕಿ.ಮೀ.ಗಿಂತ ಹೆಚ್ಚು ದೂರ ಸಂಚರಿಸುವವರಿಗೆ ಟಿಕೆಟ್ ದರದ ಏರಿಕೆಯ ವೇಗ ಸ್ವಲ್ಪ ಕಡಿಮೆಯಾಗಲಿದೆ. 10 ಕಿ.ಮೀ. ನಂತರದ ಪ್ರತಿ 5 ಕಿ.ಮೀ.ಗೆ ₹ 10 ಹೆಚ್ಚಳವಾಗಲಿದೆ.
ಈ ಹಿಂದೆ ಎರಡನೇ ನಿಲ್ದಾಣಕ್ಕೆ ₹ 15 ಆನಂತರ ₹ 2 ಅಥವಾ ₹ 3 ಹೆಚ್ಚಳವಾಗುತ್ತಿತ್ತು. ಆದರೆ ಪರಿಷ್ಕೃತ ದರದಲ್ಲಿ ಭಾರಿ ಏರಿಕೆಯಾಗಿದೆ. ಈಗ ಎಲ್ಲ ಏರಿಕೆಯೂ ₹ 10ಕ್ಕಿಂತ ಕಡಿಮೆ ಇಲ್ಲ. ಪ್ರತಿ ನಿಲ್ದಾಣಗಳ ನಡುವಿನ ಅಂತರ ಬೇರೆ ಬೇರೆ ಆಗಿರುವುದರಿಂದ ದರವೂ ಬೇರೆ ಬೇರೆಯಾಗಲಿದೆ. ಹಿಂದೆ ಮೊದಲ ನಿಲ್ದಾಣಕ್ಕೆ ₹ 10, ಎರಡನೇ ನಿಲ್ದಾಣಕ್ಕೆ ₹ 15 ಇತ್ತು. ಈಗ ಹೊರಟಲ್ಲಿಂದ ಸಿಗುವ ಎರಡು ಸ್ಟೇಷನ್‌ಗಳು 2 ಕಿ.ಮೀ. ಒಳಗೆ ಇದ್ದರೆ ಮೊದಲ ಸ್ಟೇಷನ್‌ಗೂ ₹ 10, ಎರಡನೇ ಸ್ಟೇಷನ್‌ಗೂ ಅಷ್ಟೇ ಇರಲಿದೆ.
ರಿಯಾಯಿತಿ: ಮೆಟ್ರೊ ಸ್ಮಾರ್ಟ್‌ಕಾರ್ಡ್ ಹೊಂದಿರುವವರಿಗೆ ಶೇ 5 ರಿಯಾಯಿತಿ ಈಗಾಗಲೇ ಇದೆ. ಜನದಟ್ಟಣೆ ಕಡಿಮೆ ಇರುವ (ನಾನ್ ಪೀಕ್ ಅವರ್) ಅವಧಿಯಲ್ಲಿ ಪ್ರಯಾಣಿಸಿದರೆ ಹೆಚ್ಚುವರಿಯಾಗಿ ಶೇ 5 ರಿಯಾಯಿತಿ ದೊರೆಯಲಿದೆ.
ವಾರದ ದಿನಗಳಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 9ರವರೆಗೆ ಜನದಟ್ಟಣೆ ಅವಧಿ ಎಂದು ಗುರುತಿಸಲಾಗಿದೆ. ಉಳಿದ ಅವಧಿಯಲ್ಲಿ ಪ್ರಯಣಿಸಿದರೆ ಮಾತ್ರ ಹೆಚ್ಚುವರಿ ರಿಯಾಯಿತಿ ದೊರೆಯಲಿದೆ. ಎಲ್ಲ ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ (ಜನವರಿ 26, ಆಗಸ್ಟ್ 15, ಅಕ್ಟೋಬರ್ 2) ದಿನಪೂರ್ತಿ ಶೇ 10ರಷ್ಟು ರಿಯಾಯಿತಿ ದೊರೆಯಲಿದೆ.
ಪ್ರಯಾಣಕ್ಕೆ ಬಳಸುವ ಸ್ಮಾರ್ಟ್‌ಕಾರ್ಡ್‌ನಲ್ಲಿ ಹಿಂದೆ ಕನಿಷ್ಠ ₹ 50 ಇದ್ದರೆ ಸಾಕಿತ್ತು. ಈಗ ₹ 90 ಇರಬೇಕು. ಪ್ರವಾಸಿ ಕಾರ್ಡ್‌ಗೆ ಇಂದು ದಿನಕ್ಕೆ ₹ 300, ಮೂರು ದಿನಕ್ಕೆ ₹ 600 ಹಾಗೂ ಐದು ದಿನಕ್ಕೆ ₹ 800 ನಿಗದಿಪಡಿಸಿದ್ದಾರೆ. ಕ್ಯೂಆರ್ ಕೋಡ್ ಬಳಸಿ ಟಿಕೆಟ್ ಪಡೆಯುವವರ ಸಂಖ್ಯೆ ಅಧಿಕವಿದ್ದು, ಪರಿಷ್ಕೃತ ದರದಲ್ಲಿ ಯಾವುದೇ ರಿಯಾಯಿತಿ ನೀಡಿಲ್ಲ.
ಶೇ 100 ಹೆಚ್ಚಳ
ಕಿಲೋ ಮೀಟರ್ ಆಧಾರದಲ್ಲಿ ಹೆಚ್ಚಳ ಮಾಡಿರುವುದು ಕೆಲವು ನಿಲ್ದಾಣಗಳಿಗೆ ಶೇ 100ರಷ್ಟು ಹೆಚ್ಚಳ ಮಾಡಿದಂತಾಗಿದೆ. ಮಂತ್ರಿಮಾಲ್ ಸಂಪಿಗೆರಸ್ತೆಯಿಂದ ಮಹಾತ್ಮಗಾಂಧಿ ರಸ್ತೆಗೆ ಹಿಂದೆ ₹ 20 ಇತ್ತು. ಈಗ ಪರಿಷ್ಕೃತದರದ ಪ್ರಕಾರ ₹ 40 ನೀಡಬೇಕು. ಇದು ಶೇ 100 ಹೆಚ್ಚಳವಾಗಿದೆ. ಮೆಜೆಸ್ಟಿಕ್‌ನಿಂದ ದೀಪಾಂಜಲಿ ನಗರಕ್ಕೆ ಹಳೇ ದರ ₹ 22 ಇದ್ದಿದ್ದು ₹ 40ಕ್ಕೆ (ಶೇ 90) ಏರಿಕೆಯಾಗಿದೆ. ಇದೇ ರೀತಿ ಹಲವು ನಿಲ್ದಾಣಗಳಿಗೆ ಶೇ 50ರಿಂದ ಶೇ 100ರವರೆಗೆ ಹೆಚ್ಚಳವಾಗಿದೆ.
ಮೊದಲ 2 ಕಿ.ಮೀ.ಗೆ ಯಾವುದೇ ದರ ಹೆಚ್ಚಳ ಮಾಡದ ‘ನಮ್ಮ ಮೆಟ್ರೊ‘ ಗರಿಷ್ಠ ದರವನ್ನು ಶೇ 50ರಷ್ಟು ಹೆಚ್ಚಿದೆ. ಹಿಂದೆ ಗರಿಷ್ಠ ದರ ₹ 60 ಇತ್ತು. ಅದನ್ನು ₹ 90ಕ್ಕೆ ಏರಿಸಿದೆ. 25 ಕಿ.ಮೀ.ಗಿಂತ ಅಧಿಕ ದೂರ ಎಷ್ಟೇ ಪ್ರಯಾಣಿಸಿದರೂ ₹ 90 ಇರಲಿದೆ. ಸದ್ಯ ನೇರಳೆ ಮಾರ್ಗವು 43.49 ಕಿ.ಮೀ. ಹಾಗೂ ಹಸಿರು ಮಾರ್ಗವು 33.5. ಕಿ.ಮೀ. ಉದ್ದವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.