ADVERTISEMENT

ಹೆಚ್ಚಿದ ವ್ಯಕ್ತಿ ಭಜನೆ: ನರಹಳ್ಳಿ ಆತಂಕ

ವಿಚಾರ ಸಂಕಿರಣದಲ್ಲಿ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಬೇಸರ

​ಪ್ರಜಾವಾಣಿ ವಾರ್ತೆ
Published 6 ಮೇ 2019, 19:16 IST
Last Updated 6 ಮೇ 2019, 19:16 IST
ವಿಚಾರ ಸಂಕಿರಣದಲ್ಲಿ ಲೇಖಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿದರು (ಎಡದಿಂದ) ಡಾ ಎಂ.ಎಸ್ ಆಶಾದೇವಿ, ಡಾ ಬಸವರಾಜ ಕಲ್ಗುಡಿ, ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ, ವೈ.ಕೆ.ಮುದ್ದುಕೃಷ್ಣ, ನರಸಿಂಹಮೂರ್ತಿ –ಪ್ರಜಾವಾಣಿ ಚಿತ್ರ
ವಿಚಾರ ಸಂಕಿರಣದಲ್ಲಿ ಲೇಖಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿದರು (ಎಡದಿಂದ) ಡಾ ಎಂ.ಎಸ್ ಆಶಾದೇವಿ, ಡಾ ಬಸವರಾಜ ಕಲ್ಗುಡಿ, ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ, ವೈ.ಕೆ.ಮುದ್ದುಕೃಷ್ಣ, ನರಸಿಂಹಮೂರ್ತಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರಸ್ತುತ ಚರಿತ್ರೆ ಪುರಾಣವಾಗಿ ಮಾರ್ಪಟ್ಟಿದ್ದು, ಸಮಾಜದಲ್ಲಿ ವ್ಯಕ್ತಿ ಭಜನೆ ಹೆಚ್ಚಾಗುತ್ತಿದೆ’ ಎಂದುವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಸೋಮವಾರ ಆತಂಕ ವ್ಯಕ್ತಪಡಿಸಿದರು.

ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಪ್ರತಿಷ್ಠಾನ ಆಯೋಜಿಸಿದ್ದ ‘ಡಾ.ಜಿ.ಎಸ್‌.ಎಸ್‌ ಸಾಹಿತ್ಯದ ಭಿನ್ನನೆಲೆಗಳು’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಭಾರತದ ಸಂದರ್ಭದಲ್ಲಿ ಚರಿತ್ರೆ ಬಹಳ ಬೇಗ ಪುರಾಣವಾಗುತ್ತದೆ. ಅಂಥ ಪುರಾಣಗಳಿಂದ ಭಿನ್ನ ಅವತಾರಗಳು ತೇಲಿ ಬರುತ್ತವೆ. ಜಿ.ಎಸ್‌.ಶಿವರುದ್ರಪ್ಪ ಎಚ್ಚರಿಕೆಯನ್ನು ಮೊದಲೇ ನೀಡಿದ್ದರು. ಸುಡುತ್ತಿರುವ ದ್ವೇಷದ ಬೆಂಕಿಯಲ್ಲಿ ಪ್ರೀತಿ ಹಣತೆ ಹಚ್ಚುವುದು ಹೇಗೆ ಎನ್ನುವುದನ್ನು ಅವರು ಕಂಡುಕೊಂಡಿದ್ದರು’ ಎಂದರು.

ADVERTISEMENT

‘ಒಂದು ತಲೆಮಾರಿನ ಆಲೋಚನಾ ಕ್ರಮಕ್ಕೆ ಬೇಕಾದ ಸೃಜನಶೀಲತೆಯನ್ನು ಒದಗಿಸಿಕೊಟ್ಟ ಬಹುದೊಡ್ಡ ಚೇತನ. ಅವರು ಹಳೆ ತಲೆಮಾರಿನವರ ಜೊತೆಗೆ ಉತ್ತಮ ಸಂಬಂಧ ಹೊಂದುವ ಮೂಲಕ ಹೊಸ ತಲೆಮಾರಿಗೆ ಪ್ರೇರಕ ಶಕ್ತಿಯಾಗಿದ್ದರು’ ಎಂದು ಹೇಳಿದರು.

‘ಸಮಾಜದಲ್ಲಿ ದ್ವೇಷ, ಅಸಹನೆ ಹೆಚ್ಚಾಗಿದೆ. ಧರ್ಮ ಮತ್ತು ರಾಜಕಾರಣ ಕಲುಷಿತವಾಗಿವೆ. ಇಂಥ ಸಂದರ್ಭದಲ್ಲಿ ಜಿಎಸ್‌ಎಸ್‌ ಸಾಹಿತ್ಯ ಭರವಸೆಯ ಬೆಳ್ಳಿರೇಖೆ. ಹಿಂದೆಂದಿಗಿಂತಲೂ ಇಂದು ಅದು ಹೆಚ್ಚು ಪ್ರಸ್ತುತವಾಗುತ್ತದೆ’ ಎಂದರು.

ವಿಮರ್ಶಕ ಬಸವರಾಜ ಕಲ್ಗುಡಿ, ‘ಜಿಎಸ್‌ಎಸ್‌ ಅವರು ಬೇಂದ್ರೆ, ಕುವೆಂಪು ಅವರಂತೆಯೇ ಸಾಮಾನ್ಯರಿಗೆ ದಕ್ಕಿದ್ದರು. ಅಹಂ ತುಂಬಿಕೊಂಡು ಬೀಗುತ್ತಿದ್ದ ವಿಮರ್ಶಕ ಮಂಡಳಿ ನಡುವೆಯೂ ಶಿಷ್ಯರನ್ನೇ ಸಂವಾದದ ನೆಲೆಯನ್ನಾಗಿಸಿಕೊಂಡಿದ್ದರು’ ಎಂದು ವಿವರಿಸಿದರು.

ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ, ‘ಕನ್ನಡದ ಯಾವ ಕವಿಗೂ ಎದುರಾಗದಷ್ಟು ಬಿಕ್ಕಟ್ಟುಗಳು ಜಿಎಸ್‌ಎಸ್‌ಗೆ ಎದುರಾಗಿದ್ದವು. ಮುಂದೆ ಅವು ಅಭಿವ್ಯಕ್ತಿ ರೂಪ ಪಡೆದು ಸುಂದರ ಕಾವ್ಯಗಳಾದವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.