ADVERTISEMENT

Independence Day 2025: ವಿವಿಧ ಪಕ್ಷಗಳಿಂದ ಸ್ವಾತಂತ್ರ್ಯ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 19:06 IST
Last Updated 15 ಆಗಸ್ಟ್ 2025, 19:06 IST
   

ಮತ ಕಳ್ಳತನದಿಂದ ದೇಶದ ಗೌರವಕ್ಕೆ ಧಕ್ಕೆ: ಡಿಕೆಶಿ

ಬೆಂಗಳೂರು: ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಕಚೇರಿಗಳಲ್ಲಿ 79ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕೆಪಿಸಿಸಿ ಕಚೇರಿ:

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು, ಬಲಿದಾನ ಮಾಡಿದವರು ಕಾಂಗ್ರೆಸಿಗರು. ಇತಿಹಾಸವನ್ನು ಜನರಿಗೆ ತಲುಪಿಸಬೇಕು’ ಎಂದು ಹೇಳಿದರು.

‘ಕುತಂತ್ರಗಳ ಮೂಲಕ ಈ ಸ್ವಾತಂತ್ರ್ಯಕ್ಕೆ ಧಕ್ಕೆ ತರುವವರು ಸಂವಿಧಾನ ವಿರೋಧಿಗಳು ಮಾತ್ರವಲ್ಲ, ಜೀವ ವಿರೋಧಿಗಳು. ಸಮಾಜಘಾತುಕರು. ಮತ ಕಳ್ಳತನ ದೇಶದ ಗೌರವಕ್ಕೆ ಧಕ್ಕೆ ತರುತ್ತಿದೆ’ ಎಂದರು.

ADVERTISEMENT

‘ಮುಂದಿನ ಆರು ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಎಲ್ಲರೂ ಶ್ರಮಿಸಿ ಕಾಂಗ್ರೆಸ್‌ ‍ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂದರು.

ಜೆಡಿಎಸ್‌ ಕಚೇರಿ:

‘ಪ್ರಧಾನಿ ನರೇಂದ್ರ ಮೋದಿ ಅವರ ಹನ್ನೊಂದು ವರ್ಷಗಳ ಆಡಳಿತದಲ್ಲಿ ಭಾರತದ ಶತ್ರುಗಳು ಕಂಗಾಲಾಗಿದ್ದಾರೆ. ಆಪರೇಷನ್‌ ಸಿಂಧೂರ ಹೆಮ್ಮೆಯ ಕಾರ್ಯಾಚರಣೆ ಆಗಿದ್ದು, ಪಾಕಿಸ್ತಾನದಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರ ಮೇಲೆ ನಿರ್ದಿಷ್ಟ ದಾಳಿ ನಡೆಸಿದ ಸೇನೆಯ ಪರಾಕ್ರಮವನ್ನು ನಾವು ಸ್ಮರಿಸಬೇಕು’ ಎಂದು ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್‌ ಗೌಡ ಹೇಳಿದರು.

ಜೆಡಿಎಸ್‌ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ರಾಷ್ಟ್ರಕ್ಕೆ ಮತ್ತು ರಾಜ್ಯಕ್ಕೆ ಮಾಜಿ ಪ್ರಧಾನಿ ಎಚ್.‌ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.‌ಡಿ. ಕುಮಾರಸ್ವಾಮಿ ನೀಡಿರುವ ಕೊಡುಗೆಗಳನ್ನು ಜನರಿಗೆ ತಿಳಿಸಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಮಾಜಿ ಶಾಸಕರಾದ ಎಂ.ಎಸ್. ನಾರಾಯಣರಾವ್, ಆರ್. ಚೌಡರೆಡ್ಡಿ ತೂಪಲ್ಲಿ, ಕೆಎಸ್ಆರ್‌ಟಿಸಿ ಮಾಜಿ ಅಧ್ಯಕ್ಷ ಟಿ.ಪ್ರಭಾಕರ್, ಬೆಂಗಳೂರು ನಗರ ಉಸ್ತುವಾರಿ ಜಗದೀಶ್ ನಾಗರಾಜಯ್ಯ, ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಶೈಲಾ ಸಂತೋಜಿ ರಾವ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.