ADVERTISEMENT

ಭಾರತವನ್ನು ವಿಶ್ವದ ಆಹಾರ ಭಂಡಾರವಾಗಿಸಲು ಶಿವರಾಜ್ ಸಿಂಗ್ ಚೌಹಾಣ್ ಕರೆ

’ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 16:25 IST
Last Updated 8 ಜೂನ್ 2025, 16:25 IST
ಪ್ರಗತಿಪರ ರೈತರೊಬ್ಬರ ತಾಕಿಗೆ ಭೇಟಿ ನೀಡಿದ್ದ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್ ಚೌಹಾಣ್ ಅವರು ಡ್ರ್ಯಾಗನ್ ಫ್ರೂಟ್ ಕೃಷಿ ಕುರಿತು ಮಾಹಿತಿ ಪಡೆದರು. ಐಐಎಚ್‌ಆರ್‌ ವಿಜ್ಞಾನಿ ಕೆ.ಕರುಣಾಕರನ್ ಹಾಜರಿದ್ದರು.
ಪ್ರಗತಿಪರ ರೈತರೊಬ್ಬರ ತಾಕಿಗೆ ಭೇಟಿ ನೀಡಿದ್ದ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್ ಚೌಹಾಣ್ ಅವರು ಡ್ರ್ಯಾಗನ್ ಫ್ರೂಟ್ ಕೃಷಿ ಕುರಿತು ಮಾಹಿತಿ ಪಡೆದರು. ಐಐಎಚ್‌ಆರ್‌ ವಿಜ್ಞಾನಿ ಕೆ.ಕರುಣಾಕರನ್ ಹಾಜರಿದ್ದರು.   

ಬೆಂಗಳೂರು/ಹೆಸರಘಟ್ಟ: ‘ಕೃಷಿಯಲ್ಲಿ ವೈವಿಧ್ಯ, ಸುಸ್ಥಿರ ಕೃಷಿ ವಿಧಾನಗಳು ಹಾಗೂ ತಂತ್ರಜ್ಞಾನ ಆಧಾರಿತ ಕೃಷಿ ಅಳವಡಿಸಿಕೊಳ್ಳುವ ಮೂಲಕ ಭಾರತವನ್ನು ಜಗತ್ತಿನ ಆಹಾರ ಭಂಡಾರವಾಗಿಸಬೇಕು’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ರೈತರಿಗೆ ಕರೆ ನೀಡಿದರು.

ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಭಾನುವಾರ ಆಯೋಜಿಸಿದ್ದ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ ಉದ್ಘಾಟಿಸಿ, ಪ್ರಗತಿಪರ ರೈತರನ್ನು ಸನ್ಮಾನಿಸಿ ಅವರು ಮಾತನಾಡಿದರು.

ರೈತರು ಕೈಗೊಂಡಿರುವ ಸಂಶೋಧನೆಗಳು ಮತ್ತು ಉದ್ಯಮಶೀಲತೆಯನ್ನು ಪ್ರಶಂಸಿಸಿದ ಸಚಿವರು, ಉನ್ನತ ಸಂಸ್ಥೆಗಳು ಮತ್ತು ಕೃಷಿ ನೀತಿಗಳ ಮೂಲಕ ರೈತರನ್ನು ಸಬಲೀಕರಣಗೊಳಿಸುವಂತೆ ತಿಳಿಸಿದರು.

ADVERTISEMENT

ಸಂಶೋಧನೆಗಳನ್ನು ಪ್ರಯೋಗಾಲಯಗಳಿಂದ ರೈತರ ಹೊಲಕ್ಕೆ ವರ್ಗಾಯಿಸುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿರುವ ಐಸಿಎಆರ್‌– ಐಐಎಚ್‌ಆರ್ ಮತ್ತು ಇತರೆ ಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಿದ ಸಚಿವರು, ‘ರಾಜ್ಯ ಸರ್ಕಾರ, ಕೃಷಿ ಇಲಾಖೆ, ಐಸಿಎಆರ್ ಸಂಸ್ಥೆಗಳು ಹಾಗೂ ರೈತರು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ವು ‘ಒಂದು ದೇಶ, ಒಂದು ಕೃಷಿ, ಒಂದು ತಂಡ’ ಎಂಬ ಮನೋಭಾವವನ್ನು ಬೆಳೆಸುತ್ತಿದೆ. ಈ ಅಭಿಯಾನದಿಂದ ಹೊಸ ತಂತ್ರಜ್ಞಾನಗಳು ನೇರವಾಗಿ ರೈತರ ಹೊಲದವರೆಗೆ ತಲುಪುತ್ತಿದ್ದು, ತ್ವರಿತ ಪರಿಣಾಮ ಬೀರುತ್ತಿವೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಡಾ. ಕೆ. ಸುಧಾಕರ್, ಯಲಹಂಕ ಕ್ಷೇತ್ರ ಶಾಸಕ ಎಸ್. ಆರ್. ವಿಶ್ವನಾಥ್, ತೋಟಗಾರಿಕೆ ಇಲಾಖೆಯ ಡಿಡಿಜಿ ಸಂಜಯ್ ಕುಮಾರ್ ಸಿಂಗ್, ಪಶು ವಿಜ್ಞಾನ ಇಲಾಖೆಯ ಡಿಡಿಜಿ ಡಾ.ರಾಘವೇಂದ್ರ ಭಟ್ಟ, ಐಸಿಎಆರ್– ಅಟಾರಿ ನಿರ್ದೇಶಕ ವೆಂಕಟ ಸುಬ್ರಮಣಿಯನ್, ಐಐಎಚ್‌ಆರ್ ನಿರ್ದೇಶಕ ತುಷಾರ್ ಕಾಂತಿ ಬೆಹ್ರಾ ಭಾಗವಹಿಸಿದ್ದರು.

ರೈತರ ಕ್ಷೇತ್ರಗಳಿಗೆ ಭೇಟಿ 

ಸಚಿವ ಚೌಹಾಣ್ ಅವರು ಐಐಎಚ್‌ಆರ್ ಸಮೀಪದಲ್ಲಿರುವ ಡ್ರ್ಯಾಗನ್ ಫ್ರೂಟ್ ಟೊಮೆಟೊ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆದ ಪ್ರಗತಿಪರ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿದರು. ರೈತರು ಅಳವಡಿಸಿಕೊಂಡಿದ್ದ ನವೀನ ತಂತ್ರಜ್ಞಾನ ಕೃಷಿಯ ಮಾದರಿಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು. ನಂತರ ಐಐಎಚ್‌ಆರ್ ನರ್ಸರಿ ಬೆಸ್ಟ್‌–ಹಾರ್ಟಿ ಇನ್‌ಕ್ಯುಬೇಷನ್‌ ಕೇಂದ್ರಕ್ಕೆ ಭೇಟಿ ನೀಡಿದರು. ಕೇಂದ್ರದಲ್ಲಿರುವ ಕೃಷಿ ಉದ್ಯಮ ಮತ್ತು ಸಂಸ್ಕರಣಾ ಕಾರ್ಯಗಳನ್ನು ಪರಿಶೀಲಿಸಿದರು. ಪ್ರಗತಿಪರ ರೈತರಿಗೆ ಸನ್ಮಾನ: ನವೋದ್ಯಮ ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಸಾಧನೆ ಮಾಡಿರುವ ಪ್ರಗತಿಪರ ರೈತರನ್ನು ಸಚಿವರು ಸನ್ಮಾನಿಸಿದರು.‌ ತೋಟಗಾರಿಕೆಯ ನೂತನ ತಳಿಗಳು ಹೂವುಗಳು ತರಕಾರಿಗಳು ಔಷಧೀಯ ಸಸ್ಯಗಳ ಪ್ರದರ್ಶನವನ್ನು ಸಚಿವರು ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.