ADVERTISEMENT

ಇಂದಿರಾ ಕ್ಯಾಂಟೀನ್‌ ನಿರ್ವಹಣೆ–ಸರ್ಕಾರ ನಿರಾಸಕ್ತಿ

ಶೇ 25ರಷ್ಟು ಅನುದಾನ ಮಾತ್ರ ಭರಿಸಬಹುದು– ಹಣಕಾಸು ಇಲಾಖೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:46 IST
Last Updated 24 ಸೆಪ್ಟೆಂಬರ್ 2019, 19:46 IST
   

ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಯೋಜನೆಯ ಸಂಪೂರ್ಣ ವೆಚ್ಚವನ್ನು ಭರಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಶೇ 100ರಷ್ಟು ಸರ್ಕಾರದ ಅನುದಾನವನ್ನೇ ನೆಚ್ಚಿಕೊಂಡು ಬಿಬಿಎಂಪಿ ಈ ಯೋಜನೆಯನ್ನು ಆರಂಭಿಸಿತ್ತು. ಆದರೆ, ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರ ಈ ಯೋಜನೆಗೆ 2019–20ರ ಬಜೆಟ್‌ನಲ್ಲಿ ಯಾವುದೇ ಅನುದಾನ ಕಾಯ್ದಿರಿಸಿಲ್ಲ. ಹಳೆ ಗುತ್ತಿಗೆ ಅವಧಿ 2019ರ ಆ.15ಕ್ಕೆ ಮುಕ್ತಾಯವಾಗಿದೆ. ಸದ್ಯಕ್ಕೆ ಬಿಬಿಎಂಪಿ ತಾತ್ಕಾಲಿಕ ನೆಲೆಯಲ್ಲಿ ಕ್ಯಾಂಟೀನ್‌ಗಳನ್ನು ನಿರ್ವಹಿಸುತ್ತಿದೆ. ಬಜೆಟ್‌ನಲ್ಲಿ ಅನುದಾನ ನೀಡುವಂತೆ ಸರ್ಕಾರವನ್ನು ಪಾಲಿಕೆ ಕೋರಿದೆ.

‘ಕ್ಯಾಂಟೀನ್‌ ನಿರ್ವಹಣೆಗೆ ತಗಲುವ ವೆಚ್ಚದಲ್ಲಿ ಶೇ 50ರಷ್ಟನ್ನಾದರೂ ಭರಿಸುವಂತೆ ಸರ್ಕಾರವನ್ನು ಕೋರಿದ್ದೆವು. ಯೋಜನಾ ವೆಚ್ಚದಲ್ಲಿ ಹೆಚ್ಚೆಂದರೆ ಶೇ 25ರಷ್ಟನ್ನು ಭರಿಸಬಹುದು ಎಂದು ಹಣಕಾಸು ಇಲಾಖೆ ಅಭಿಪ್ರಾಯ ನೀಡಿದೆ’ ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದರು.

ADVERTISEMENT

ಶೇ 75ರಷ್ಟು ಮೊತ್ತ ಭರಿಸುವುದು ಪಾಲಿಕೆಗೆ ಹೊರೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ಈ ಕ್ಯಾಂಟೀನ್‌ನಿಂದ ಬಡವರಿಗೆ ಅನುಕೂಲವಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೇವೆ. ಮುಂದಿನ ನಿರ್ಧಾರ ಅವರೇ ಕೈಗೊಳ್ಳಬೇಕಿದೆ’ ಎಂದು ಅನಿಲ್‌ ಕುಮಾರ್‌ ಉತ್ತರಿಸಿದರು.

‘ಕ್ಯಾಂಟೀನ್‌ ಗುತ್ತಿಗೆದಾರರಿಗೆ ಅವಶ್ಯಕತೆಗಿಂತ ಹೆಚ್ಚು ಬಿಲ್‌ ಪಾವತಿಸಲಾಗಿದೆ ಎಂಬ ದೂರಿನ ಬಗ್ಗೆಸರ್ಕಾರ ತನಿಖೆಗೆ ಆದೇಶಿಸಿದೆ. ಇದರಿಂದ ಹೊಸ ಟೆಂಡರ್‌ ಕರೆಯಲು ಈ ತನಿಖೆಯಿಂದ ಅಡ್ಡಿ ಆಗದು. ಸರ್ಕಾರ ಅನುದಾನ ನೀಡಿದರೆ ಟೆಂಡರ್‌ ಪ್ರಕ್ರಿಯೆ ಮುಂದುವರಿಸುತ್ತೇವೆ’ ಎಂದರು.

‘ಅರ್ಧದಷ್ಟು ಪೂರ್ಣಗೊಂಡ ವೈಟ್‌ಟಾಪಿಂಗ್‌ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ. ಅದಕ್ಕೆ ಸರ್ಕಾರ ತಡೆ ನೀಡಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘₹210 ಕೋಟಿಗೆ ಬೇಡಿಕೆ’
ಕ್ಯಾಂಟೀನ್‌ಗಳ ಭದ್ರತಾ ವ್ಯವಸ್ಥೆ ಹಾಗೂ ಆವರಣ ಗೋಡೆ ನಿರ್ಮಾಣಕ್ಕಾಗಿ ಪಾಲಿಕೆ ತನ್ನ ಅನುದಾನದಲ್ಲಿ 2017ರಲ್ಲಿ ₹ 24.37 ಕೋಟಿ ವೆಚ್ಚ ಮಾಡಿತ್ತು. 2018–19ರಲ್ಲೂ ಸರ್ಕಾರ ಹಂಚಿಕೆ ಮಾಡಿದಷ್ಟು ಅನುದಾನ ಬಿಡುಗಡೆ ಮಾಡದೇ, ₹ 21.66 ಕೋಟಿ ಬಾಕಿ ಉಳಿಸಿಕೊಂಡಿತ್ತು. ಇವುಗಳನ್ನೂ ಸೇರಿಸಿ, 2019–20ನೇ ಸಾಲಿಗೆ ₹ 210 ಕೋಟಿ ಅನುದಾನ ಹಂಚಿಕೆ ಮಾಡುವಂತೆ ಕೋರಿ ಪಾಲಿಕೆ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು.

ಅಂಕಿ ಅಂಶ
173:
ಇಂದಿರಾ ಕ್ಯಾಂಟೀನ್‌ಗಳು (ಸ್ಥಿರ) ಬಿಬಿಎಂಪಿ ವ್ಯಾಪ್ತಿಯಲ್ಲಿವೆ.
18:ಸಂಚಾರಿ ಇಂದಿರಾ ಕ್ಯಾಂಟೀನ್‌ಗಳಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.