ADVERTISEMENT

ಆರೋಹಣ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸಾಮಾಜಿಕ ಆವಿಷ್ಕಾರಗಳಿಗೆ ಇನ್ಫೊಸಿಸ್‌ ಪ್ರತಿಷ್ಠಾನದಿಂದ ₹1.5 ಕೋಟಿ ಮೊತ್ತದ ಬಹುಮಾನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 18:49 IST
Last Updated 15 ಜುಲೈ 2019, 18:49 IST
   

ಬೆಂಗಳೂರು:ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಅಥವಾ ಅನ್ವೇಷಣೆ ನಡೆಸಿದವರಿಗೆ ನೀಡಲಾಗುವ ₹1.5 ಕೋಟಿ ಮೊತ್ತದ ಆರೋಹಣ ಪ್ರಶಸ್ತಿಗಳಿಗೆ ಇನ್ಫೊಸಿಸ್‌ ಪ್ರತಿಷ್ಠಾನವು ಅರ್ಜಿ ಆಹ್ವಾನಿಸಿದೆ.

ಎರಡನೇ ಆವೃತ್ತಿಯ ಈ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ 30 ಕೊನೆಯ ದಿನ. ಸೋಮವಾರದಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

‘ದೇಶದ ಮೂಲೆ ಮೂಲೆಯಲ್ಲಿರುವ ಜನ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳನ್ನು ಪ್ರತಿಷ್ಠಾನವು ನಿರಂತರವಾಗಿ ಗಮನಿಸುತ್ತಿದೆ. ಅವುಗಳಿಗೆ ಪರಿಹಾರೋಪಾಯ ತೋರುವ, ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕಿಳಿಸುವ ವ್ಯಕ್ತಿಗಳು ಮತ್ತು ಸಂಘಟನೆಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದೇವೆ’ ಎಂದು ಪ್ರತಿಷ್ಠಾನದ ಮುಖ್ಯಸ್ಥರಾದ ಸುಧಾಮೂರ್ತಿ ಹೇಳಿದರು.

ADVERTISEMENT

ಸಾಮಾಜಿಕವಾಗಿ ಹಿಂದುಳಿದ ಪ್ರದೇಶ, ಸಮುದಾಯಗಳಿಗೆ ಪರಿಹಾರ ಕಲ್ಪಿಸಿಕೊಟ್ಟ ವ್ಯಕ್ತಿ, ತಂಡ ಅಥವಾ ಸರ್ಕಾರೇತರ ಸಂಘಟನೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು. 18 ವರ್ಷ ದಾಟಿದ ಯಾವುದೇ ವ್ಯಕ್ತಿ ಅರ್ಜಿ ಸಲ್ಲಿಸಬಹುದು.

ಅರ್ಜಿಯೊಂದಿಗೆ ಆವಿಷ್ಕಾರದ ಮಾದರಿ ಮತ್ತು ವಿಡಿಯೊವನ್ನು ಕಳುಹಿಸಬೇಕು. ಪರಿಣತರ ತಂಡ ಇವುಗಳನ್ನು ಪರಿಶೀಲಿಸಿ, 50 ಮಾದರಿಗಳನ್ನು ಆಯ್ಕೆ ಮಾಡುತ್ತದೆ. ತೀರ್ಪುಗಾರರು ಅಂತಿಮವಾಗಿ 30 ಮಾದರಿ ಅಥವಾ ಅನ್ವೇಷಣೆಗಳನ್ನು ಆಯ್ಕೆ ಮಾಡುತ್ತಾರೆ.

‘ಕಳೆದ ಬಾರಿ 500 ಅರ್ಜಿಗಳು ಬರಬಹುದೆಂದು ನಿರೀಕ್ಷಿಸಿದ್ದೆವು. ಆದರೆ, 900ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಉತ್ತರ ಭಾರತಕ್ಕಿಂತ, ದಕ್ಷಿಣ ಭಾರತದಿಂದ ಹೆಚ್ಚು ಅರ್ಜಿಗಳು ಬಂದಿದ್ದವು. ಈ ಬಾರಿ ಎರಡು ತಿಂಗಳು ಮುನ್ನವೇ ಪ್ರಕ್ರಿಯೆ ಆರಂಭಿಸುವುದರಿಂದ ಹೆಚ್ಚು ಅರ್ಜಿಗಳು ಬರುವ ನಿರೀಕ್ಷೆ ಇದೆ. ಉತ್ತಮ ಅನ್ವೇಷಣೆಗಳಿದ್ದರೆ, ತೀರ್ಪುಗಾರರು ಸಲಹೆ ನೀಡಿದರೆ ಪ್ರಶಸ್ತಿ ಮೊತ್ತವನ್ನು ಹೆಚ್ಚಿಸಲಾಗುವುದು’ ಎಂದು ಸುಧಾಮೂರ್ತಿ ಹೇಳಿದರು.

ಅರ್ಜಿ ಸಲ್ಲಿಕೆ ಹಾಗೂ ಮಾಹಿತಿಗೆ ಜಾಲತಾಣ: www.infosys.com/aarohan ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.