ADVERTISEMENT

ಬಿಡಿಎ ನಿವೇಶನಗಳ, ಫ್ಲ್ಯಾಟ್‌ಗಳ ಆರಂಭಿಕ ಠೇವಣಿ ಶುಲ್ಕ ಶೇ 50 ಇಳಿಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 0:09 IST
Last Updated 20 ಜೂನ್ 2025, 0:09 IST
ಕೊಮ್ಮಘಟ್ಟದಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯ
ಕೊಮ್ಮಘಟ್ಟದಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ಬಡಾವಣೆಗಳ ನಿವೇಶನಗಳು, ವಸತಿ ಗೃಹ (ಫ್ಲ್ಯಾಟ್‌) ಮತ್ತು ವಿಲ್ಲಾಗಳ ಪ್ರಾರಂಭಿಕ ಠೇವಣಿ ಶುಲ್ಕವನ್ನು ಶೇಕಡ 50ರಷ್ಟು ಕಡಿಮೆ ಮಾಡಿದೆ.

ಸಾಮಾನ್ಯ ವರ್ಗದವರಿಗೆ ಶೇಕಡ 12.5 ಮತ್ತು ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇಕಡ 5ರಷ್ಟು ಶುಲ್ಕ ನಿಗದಿಪಡಿಸಲಾಗಿದೆ.

ಈ ಹಿಂದೆ ಬಿಡಿಎನಲ್ಲಿ ಯಾವುದೇ ಫ್ಲ್ಯಾಟ್‌, ನಿವೇಶನ, ವಿಲ್ಲಾ ಖರೀದಿಸಬೇಕೆಂದರೆ ಪ್ರಾರಂಭಿಕ ಠೇವಣಿಯಾಗಿ ಆಸ್ತಿಯ ಒಟ್ಟಾರೆ ಮೌಲ್ಯದಲ್ಲಿ ಸಾಮಾನ್ಯ ವರ್ಗದವರಿಗೆ ಶೇ 25ರಷ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ 10ರಷ್ಟು ನಿಗದಿಪಡಿಸಲಾಗಿತ್ತು.

ಫ್ಲ್ಯಾಟ್‌, ಮನೆಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿತ್ತು. ಹಾಗಾಗಿ ಮೇ 1 ರಿಂದ ಆರಂಭಿಕ ಮೊತ್ತವನ್ನು ಹೆಚ್ಚಿಸಲಾಗಿತ್ತು. ನಿತ್ಯ ಆನ್‌ಲೈನ್‌ನಲ್ಲಿ 5ರಿಂದ 6 ಫ್ಲ್ಯಾಟ್‌ಗಳು ಬುಕ್‌ ಆಗುತ್ತಿದ್ದು, ದರ ಹೆಚ್ಚಾದ ಬಳಿಕ ಆನ್‌ಲೈನ್‌ನಲ್ಲಿ ಬೇಡಿಕೆ ಕುಗ್ಗಿತ್ತು. ಶೇ 25ರಷ್ಟು ಮೊತ್ತ ಪಾವತಿಸುವುದು ದುಬಾರಿ ಎಂದು ಗ್ರಾಹಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೆ, ಶೇ 25ರಷ್ಟು ಹಣ ಪಾವತಿಸಿ, ನಂತರ ಬ್ಯಾಂಕ್‌ಗಳಿಂದ ಸಾಲ ಪಡೆಯುವುದು ಕಷ್ಟಕರವಾಗಿತ್ತು ಎಂಬುದು ಗ್ರಾಹಕರ ಆರೋಪ.

ADVERTISEMENT

‘ಫ್ಲ್ಯಾಟ್‌ ಮತ್ತು ಮನೆಗಳಿಗೆ ಹೆಚ್ಚು ಬೇಡಿಕೆ ಬಂದಿದ್ದರಿಂದ ಮೇ 1ರಿಂದ ಆರಂಭಿಕ ಠೇವಣಿ ಶುಲ್ಕವನ್ನು ಹೆಚ್ಚಿಸಲಾಗಿತ್ತು. ಇದರಿಂದ ಗ್ರಾಹಕರಿಗೆ ಹೆಚ್ಚು ಹೊರೆಯಾಗುತ್ತಿತ್ತು ಮತ್ತು ತಾಂತ್ರಿಕ ಸಮಸ್ಯೆಯೂ ಆಗಿತ್ತು. ಗ್ರಾಹಕರ ಒತ್ತಾಯದ ಮೇರೆಗೆ ಏರಿಕೆ ಮಾಡಿದ್ದ ದರವನ್ನು ಇಳಿಸಿ, ಹಳೆಯ ದರವನ್ನೇ ಮುಂದುವರಿಸಲಾಗಿದೆ’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆರ್ಥಿಕ ಸದಸ್ಯ ಎ.ಲೋಕೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‌‘ಜೂನ್ 21ರಂದು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಕಣಿಮಿಣಿಕೆ ವಸತಿ ಸಮುಚ್ಚಯದಲ್ಲಿ ಫ್ಯಾಟ್‌ ಮೇಳ ಆಯೋಜಿಸಲಾಗಿದೆ. ಕಣಿಮಿಣಿಕೆ, ಕೊಮ್ಮಘಟ್ಟ, ಆಲೂರು, ಗುಂಜೂರು ಫ್ಲ್ಯಾಟ್‌ಗಳು ಹಾಗೂ ಹುಣ್ಣಿಗೆರೆಯ ವಿಲ್ಲಾ ಖರೀದಿಸಬಹುದು. ರಾಷ್ಟ್ರೀಯ ಬ್ಯಾಂಕ್‌ಗಳ ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸಲಿದ್ದು, ಗ್ರಾಹಕರಿಗೆ ಮನೆ ಖರೀದಿಗೆ ಸಾಲದ ನೆರವು ನೀಡಲಿವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.